ಉಡುಪಿ: ಬ್ರಹ್ಮಾವರ ತಾಲೂಕಿನ ಫಿಶ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರ ಮಕ್ಕಳಾದ ಸುಮಾರು 30 ಮಂದಿ ಶಿಕ್ಷಣದಿಂದ ವಂಚಿತರಾಗಿ, ಶಾಲೆಗೆ ತೆರಳದೆ ಕಾಲ ಕಳೆಯುತ್ತಿರುವುದು ಬೆಳಕಿಗೆ ಬಂದಿದೆ. ನವೆಂಬರ್ 3ರಂದು ಅಕ್ಕ ಪಡೆ ತಂಡವು ಸಿಆರ್‌ಪಿ ಹಾಗೂ ಇಸಿಒ ಇಲಾಖೆಗಳ ಸಹಯೋಗದೊಂದಿಗೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಈ ಮಕ್ಕಳು ಪತ್ತೆಯಾಗಿದ್ದಾರೆ.
ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಸುಮಾರು 30 ಮಕ್ಕಳು ಯಾವುದೇ ರೀತಿಯ ಶಿಕ್ಷಣ ಪಡೆಯದೆ, ಶಾಲೆಗೆ ತೆರಳದೆ ಫ್ಯಾಕ್ಟರಿಯ ಸುತ್ತಮುತ್ತಲೇ ಕಾಲ ಕಳೆಯುತ್ತಿರುವುದು ಕಾರ್ಯಾಚರಣೆ ವೇಳೆ ಗಮನಕ್ಕೆ ಬಂದಿದೆ.
ಈ ಪೈಕಿ 6 ವರ್ಷ ಮೇಲ್ಪಟ್ಟ ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು.
ಬಳಿಕ ರಕ್ಷಿಸಲಾದ ಮಕ್ಕಳಲ್ಲಿ 7 ಬಾಲಕಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಹಾಗೂ 23 ಬಾಲಕರನ್ನು ಬಾಲಕರ ಬಾಲಮಂದಿರಕ್ಕೆ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು.




