ಮಧ್ಯ ಮೆಕ್ಸಿಕೋದಲ್ಲಿ ಸಂಘಟಿತ ಅಪರಾಧದ ಹಿಂಸಾಚಾರ ಭೀಕರ
ಸಲಾಮಾಂಕಾ (ಮೆಕ್ಸಿಕೋ): ಮಧ್ಯ ಮೆಕ್ಸಿಕೋದಲ್ಲಿ ಫುಟ್ಬಾಲ್ ಪಂದ್ಯದ ನಂತರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿ, 12 ಮಂದಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಸಂಘಟಿತ ಅಪರಾಧ ಚಟುವಟಿಕೆಗಳಿಂದ ಕಲುಷಿತಗೊಂಡಿರುವ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯ ಆಡಳಿತ ವರ್ಗದಲ್ಲಿ ಆತಂಕ ಮೂಡಿಸಿದೆ.
ಗ್ವಾನಾಜುವಾಟೊ ರಾಜ್ಯದ ಸುಮಾರು 1.6 ಲಕ್ಷ ಜನಸಂಖ್ಯೆಯಿರುವ ಸಲಾಮಾಂಕಾ ನಗರದಲ್ಲಿ ಭಾನುವಾರ ಸಮುದಾಯ ಫುಟ್ಬಾಲ್ ಮೈದಾನದಲ್ಲಿ ಪಂದ್ಯ ಮುಗಿದ ಬಳಿಕ ಸಶಸ್ತ್ರಧಾರಿಗಳು ಏಕಾಏಕಿ ಮೈದಾನಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದರು. ದಾಳಿಯಲ್ಲಿ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ದಾಳಿಯಲ್ಲಿ ಒಬ್ಬ ಮಹಿಳೆ ಹಾಗೂ ಮಗು ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಕ್ಕೆ ಮೇಯರ್ ಮನವಿ
ಸಂಘಟಿತ ಅಪರಾಧ ಗುಂಪುಗಳ ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿದ ಸಲಾಮಾಂಕಾ ಮೇಯರ್ ಸೀಸರ್ ಪ್ರೀಟೊ, ನಗರದಲ್ಲಿ ಶಾಂತಿ, ನೆಮ್ಮದಿ ಮತ್ತು ಭದ್ರತೆಯನ್ನು ಪುನಃಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
“ನಾವು ಗಂಭೀರ ಸಾಮಾಜಿಕ ಕುಸಿತದ ಹಂತವನ್ನು ಎದುರಿಸುತ್ತಿದ್ದೇವೆ. ಕ್ರಿಮಿನಲ್ ಗುಂಪುಗಳು ಅಧಿಕಾರಿಗಳನ್ನು ನಿಗ್ರಹಿಸಲು ಯತ್ನಿಸುತ್ತಿವೆ” ಎಂದು ಅವರು ಹೇಳಿದ್ದಾರೆ.
ಹೆಚ್ಚುತ್ತಿರುವ ಹಿಂಸಾಚಾರ
ಇದಕ್ಕೂ ಮುನ್ನ ಶನಿವಾರ ರಾತ್ರಿ ಸಲಾಮಾಂಕಾದಲ್ಲಿ ಮಾನವ ಅವಶೇಷಗಳನ್ನು ಒಳಗೊಂಡ ನಾಲ್ಕು ಚೀಲಗಳು ಪತ್ತೆಯಾಗಿದ್ದವು. ಹತ್ತಿರದ ಎರಡು ಸಮುದಾಯಗಳಲ್ಲಿ ಅದೇ ದಿನ ಆರು ಮಂದಿ ಕೊಲೆಯಾಗಿದ್ದರು.
ಇನ್ನೂ ಕಳೆದ ವಾರ, ಸಲಾಮಾಂಕಾ ಮೂಲದ ಸರ್ಕಾರಿ ತೈಲ ಕಂಪನಿ ಪೆಮೆಕ್ಸ್‌ನ ಸಂಸ್ಕರಣಾಗಾರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ಎಲ್ಲಾ ಬೆಳವಣಿಗೆಗಳು ಪ್ರದೇಶದಲ್ಲಿ ಹೆಚ್ಚುತ್ತಿರುವ ಸಂಘಟಿತ ಅಪರಾಧ ಹಿಂಸಾಚಾರಕ್ಕೆ ಸಾಕ್ಷಿಯಾಗಿವೆ.




