ಹೊಸದಿಲ್ಲಿ, ಜ.22: ಮುಂಗಡವಾಗಿ ಕಾದಿರಿಸಿದ್ದ ಊಟವನ್ನು ನೀಡುವಂತೆ ಕೇಳಿದ್ದಕ್ಕಾಗಿ ಏರ್ ಇಂಡಿಯಾದ ಬ್ಯಾಂಕಾಕ್–ದಿಲ್ಲಿ ವಿಮಾನದ ಪ್ರಯಾಣಿಕನಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಮಾನ ದಿಲ್ಲಿಗೆ ತಲುಪಿದ ಬಳಿಕ ಪ್ರಯಾಣಿಕನನ್ನು ವಿಮಾನನಿಲ್ದಾಣದಲ್ಲೇ ತಡೆದು ಇರಿಸಲಾಗಿದ್ದು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಹಾಗೂ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಈ ಘಟನೆ ಬಳಿಕ ವಿಮಾನದ ಪೈಲಟ್, ಪ್ರಯಾಣಿಕನ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಕುರಿತ ಎಚ್ಚರಿಕಾ ಪತ್ರವನ್ನೂ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ರುಚಿ ಕೊಕ್ಚಾ ಎಂಬವರು ಹಂಚಿಕೊಂಡಿರುವ ವೀಡಿಯೊದಲ್ಲಿ, ಸಂತ್ರಸ್ತ ಪ್ರಯಾಣಿಕ ಅಭಿಷೇಕ್ ಚೌಧುರಿ ಅವರು ತಮ್ಮ ಅನುಭವವನ್ನು ವಿವರಿಸಿದ್ದಾರೆ. ಜನವರಿ 19ರಂದು ಬ್ಯಾಂಕಾಕ್‌ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಅಭಿಷೇಕ್, ಮುಂಗಡವಾಗಿ ಮಾಂಸಹಾರಿ ಊಟವನ್ನು ಬುಕ್ ಮಾಡಿದ್ದರು. ಆದರೆ ವಿಮಾನದ ಕೊನೆಯ ಸಾಲಿಗೆ ಊಟದ ಟ್ರಾಲಿ ತಲುಪುವಷ್ಟರಲ್ಲಿ ಮಾಂಸಹಾರಿ ಊಟ ಖಾಲಿಯಾಗಿತ್ತು.
ಈ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ ಒರಟಾಗಿ ವರ್ತಿಸಿದ್ದಾರೆ ಎಂದು ಅಭಿಷೇಕ್ ಆರೋಪಿಸಿದ್ದಾರೆ. ವಿಷಯದ ಕುರಿತು ದೂರು ನೀಡುವುದಾಗಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ ನಂತರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ವಿಮಾನದಿಂದ ಇಳಿದ ತಕ್ಷಣ ದಿಲ್ಲಿ ವಿಮಾನನಿಲ್ದಾಣದಲ್ಲಿ ಅವರನ್ನು ಸಿಬ್ಬಂದಿ ವಶದಲ್ಲಿರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಪೋಸ್ಟ್ ಮಾಡದಂತೆ ಲಿಖಿತವಾಗಿ ಬರೆದುಕೊಡುವಂತೆ ಒತ್ತಡ ಹೇರಲಾಗಿದೆ ಹಾಗೂ ಅವರ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ರುಚಿ ಕೊಕ್ಚಾ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ವೀಡಿಯೊ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
‘‘ಇದು ಅಧಿಕಾರದ ದುರುಪಯೋಗ. ಪ್ರಯಾಣಿಕರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ’’ ಎಂದು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಏರ್ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.




