ನಾಗೋಯಾ: ಭಾರತದ ರೈಫಲ್ ಶೂಟರ್‌ಗಳಾದ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಮತ್ತು ನೀರಾಜ್ ಕುಮಾರ್ ಅವರು ಶುಕ್ರವಾರ ಇಲ್ಲಿ ನಡೆದ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಕ್ರಮವಾಗಿ ಐದನೇ ಮತ್ತು ಎಂಟನೇ ಸ್ಥಾನ ಪಡೆದು ವೈಯಕ್ತಿಕ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.
ಐಚಿ ಪ್ರಿಫೆಕ್ಚರ್ ಜನರಲ್ ಶೂಟಿಂಗ್ ಗ್ಯಾಲರಿಯಲ್ಲಿ ನಡೆದ ಫೈನಲ್‌ನಲ್ಲಿ ಐಶ್ವರ್ಯ 327.6 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರೆ, ನೀರಾಜ್ 299.0 ಅಂಕಗಳೊಂದಿಗೆ ಎಂಟನೇ ಸ್ಥಾನ ಪಡೆದರು.
ಚೀನಾದ ಶೂಟರ್‌ಗಳು ಮೊದಲ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಯೂಕುನ್ ಲಿಯು ಅವರು 360.5 ಅಂಕಗಳ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಝಾಂಗ್ ಚಾಂಗ್‌ಹಾಂಗ್ 360.2 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು. ಕಜಕಿಸ್ತಾನದ ಇಸ್ಲಾಂ ಸತ್ಪಯೇವ್ 348.3 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.
ಐಶ್ವರ್ಯ ಆರಂಭಿಕ ಹಂತಗಳಲ್ಲಿ ಪದಕದ ಸ್ಪರ್ಧೆಯಲ್ಲಿ ಉಳಿದಿದ್ದರು. ಪ್ರೋನ್ ಸರಣಿಯ ಬಳಿಕ ಅವರು ಆರನೇ ಸ್ಥಾನದಲ್ಲಿದ್ದರು. ಎರಡನೇ ನೀಲಿಂಗ್ ಸರಣಿಯ ನಂತರ 205.3 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಏರಿದ ಅವರು, ಅಂತಿಮವಾಗಿ ಅದೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.
ನೀರಾಜ್‌ಗೆ ಫೈನಲ್ ಹೆಚ್ಚು ಕಠಿಣವಾಗಿತ್ತು. ಎಂಟು ಮಂದಿ ಫೈನಲಿಸ್ಟ್‌ಗಳ ಪೈಕಿ ಅವರು 299 ಅಂಕಗಳೊಂದಿಗೆ ಎಂಟನೇ ಸ್ಥಾನ ಪಡೆದರು.
ಹ್ಯಾಂಗ್‌ಝೌನಲ್ಲಿ ನಡೆದ ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿ ಐಶ್ವರ್ಯ ಭಾರತದ ಅತ್ಯಂತ ಯಶಸ್ವಿ ಶೂಟರ್‌ಗಳಲ್ಲಿ ಒಬ್ಬರಾಗಿದ್ದರು. ಅಲ್ಲಿ ಅವರು ಒಟ್ಟು ನಾಲ್ಕು ಪದಕಗಳನ್ನು ಗೆದ್ದಿದ್ದರು. ಪುರುಷರ 10 ಮೀಟರ್ ಏರ್ ರೈಫಲ್ ಹಾಗೂ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದ ಅವರು, 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಕಂಚು ಹಾಗೂ 50 ಮೀಟರ್ ರೈಫಲ್ 3 ಪೊಸಿಷನ್ಸ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು.
ತಂಡ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ
ಇದಕ್ಕೂ ಮೊದಲು ಐಶ್ವರ್ಯ, ನೀರಾಜ್ ಮತ್ತು ರುದ್ರಾಂಕ್ಷ್ ಅವರನ್ನೊಳಗೊಂಡ ಭಾರತದ ತಂಡ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ತಂಡ ಫೈನಲ್‌ನಲ್ಲಿ 1762-94x ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದಿತು.
ಚೀನಾ 1766-95x ಅಂಕಗಳೊಂದಿಗೆ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾ 1751-87x ಅಂಕಗಳೊಂದಿಗೆ ಕಂಚಿನ ಪದಕ ಪಡೆದುಕೊಂಡಿತು.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಭಾರತಕ್ಕೆ ಚಿನ್ನ
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸುರುಚಿ ಮತ್ತು ಕಮಲ್‌ಜೀತ್ ಅವರು ದಾಖಲೆ ನಿರ್ಮಿಸುವ ಪ್ರದರ್ಶನ ನೀಡಿದ್ದು, ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು.
ಫೈನಲ್‌ನಲ್ಲಿ ಈ ಜೋಡಿ 484.6 ಅಂಕಗಳ ಏಷ್ಯನ್ ದಾಖಲೆ ನಿರ್ಮಿಸಿತು. ಈ ಮೂಲಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತ ತನ್ನ ಮೊದಲ ಏಷ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದುಕೊಂಡಿತು.
ಹ್ಯಾಂಗ್‌ಝೌ 2023ರಲ್ಲಿ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಟಿಎಸ್ ಗೆದ್ದಿದ್ದ ಬೆಳ್ಳಿ ಪದಕಕ್ಕಿಂತ ಇದು ಭಾರತದ ಉತ್ತಮ ಸಾಧನೆಯಾಗಿದೆ.
ಸುರುಚಿ ಮತ್ತು ಕಮಲ್‌ಜೀತ್ ಅರ್ಹತಾ ಸುತ್ತಿನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಅವರು 587-29x ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದು, ಏಷ್ಯನ್ ದಾಖಲೆಯನ್ನು ಸಮಗೊಳಿಸುವುದರ ಜೊತೆಗೆ ಹೊಸ ಏಷ್ಯನ್ ಗೇಮ್ಸ್ ಅರ್ಹತಾ ದಾಖಲೆಯನ್ನೂ ನಿರ್ಮಿಸಿದ್ದರು.
ಶೂಟಿಂಗ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 10
ಈ ಫಲಿತಾಂಶಗಳೊಂದಿಗೆ ಶೂಟಿಂಗ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿದೆ. ಇದರಲ್ಲಿ ಒಂದು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳು ಸೇರಿವೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 19ಕ್ಕೆ ತಲುಪಿದ್ದು, ಅದರಲ್ಲಿ ಎರಡು ಚಿನ್ನ ಮತ್ತು ಎಂಟು ಬೆಳ್ಳಿ ಪದಕಗಳು ಸೇರಿವೆ ಎಂದು ವರದಿ ತಿಳಿಸಿದೆ.




