Friday, September 18, 2026

ಕಾಮನ್‌ವೆಲ್ತ್ ಗೇಮ್ಸ್ 2026: 32 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡ ಘೋಷಣೆ; ನೀರಜ್ ಚೋಪ್ರಾಗೆ ಷರತ್ತುಬದ್ಧ ಅವಕಾಶ

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ 2026ರಿಗಾಗಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಭಾನುವಾರ 32 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡವನ್ನು ಪ್ರಕಟಿಸಿದೆ. ಅನುಭವಿ ಆಟಗಾರರು ಹಾಗೂ ಉದಯೋನ್ಮುಖ ಪ್ರತಿಭೆಗಳ ಸಮನ್ವಯದಿಂದ ತಂಡವನ್ನು ಆಯ್ಕೆ ಮಾಡಲಾಗಿದೆ.

ಅಂತಿಮ ಪಟ್ಟಿಯಲ್ಲಿ 22 ಪುರುಷ ಹಾಗೂ 10 ಮಹಿಳಾ ಅಥ್ಲೀಟ್‌ಗಳಿಗೆ ಸ್ಥಾನ ನೀಡಲಾಗಿದೆ. ಭಾರತದ ಕ್ರೀಡಾ ಇತಿಹಾಸದ ಶ್ರೇಷ್ಠ ಜಾವೆಲಿನ್ ಎಸೆತಗಾರ ಮತ್ತು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದ್ದರೂ, ಅವರ ಆಯ್ಕೆ ಕೆಲವು ಷರತ್ತುಗಳಿಗೆ ಒಳಪಟ್ಟಿದೆ.

ಪುರುಷರ ವಿಭಾಗದಲ್ಲಿ ಎಂ. ಶ್ರೀಶಂಕರ್, ತೇಜಸ್ವಿನ್ ಶಂಕರ್, ತಜಿಂದರ್‌ಪಾಲ್ ಸಿಂಗ್ ತೂರ್, ಪ್ರವೀಣ್ ಚಿತ್ರವೇಲ್ ಹಾಗೂ ರೋಹಿತ್ ಯಾದವ್ ಸೇರಿದಂತೆ ಹಲವು ಪ್ರಮುಖ ಅಥ್ಲೀಟ್‌ಗಳು ಸ್ಥಾನ ಪಡೆದಿದ್ದಾರೆ. ಟ್ರ್ಯಾಕ್ ಸ್ಪರ್ಧೆಗಳಲ್ಲಿ ಗುರಿಂದರ್ವೀರ್ ಸಿಂಗ್, ಅನಿಮೇಶ್ ಕುಜೂರ್ ಹಾಗೂ ಗುಲ್ವೀರ್ ಸಿಂಗ್ ಭಾರತಕ್ಕೆ ಪದಕದ ನಿರೀಕ್ಷೆ ಮೂಡಿಸಿದ್ದಾರೆ.

ಮಹಿಳಾ ವಿಭಾಗದಲ್ಲಿ ಪಾರುಲ್ ಚೌಧರಿ ಪ್ರಮುಖ ಆಕರ್ಷಣೆಯಾಗಿದ್ದು, ಮನ್‌ಪ್ರೀತ್ ಕೌರ್, ಸೀಮಾ ಹಾಗೂ ನಿಧಿ ರಾಣಿ ಎಸೆತ ವಿಭಾಗಗಳಲ್ಲಿ ಭಾರತದ ಭರವಸೆಯಾಗಿದ್ದಾರೆ. 10,000 ಮೀಟರ್ ರೇಸ್ ವಾಕ್ ಸ್ಪರ್ಧೆಗೆ ರವೀನಾ ಮತ್ತು ಪ್ರಿಯಾಂಕಾ ಆಯ್ಕೆಯಾಗಿದ್ದಾರೆ.

ಇದಲ್ಲದೆ, ಮಿಶ್ರ 4×400 ಮೀಟರ್ ರಿಲೇಗಾಗಿ ವಿಶೇಷ ಅಥ್ಲೀಟ್‌ಗಳ ಗುಂಪನ್ನೂ ಘೋಷಿಸಲಾಗಿದೆ. ಇದರಲ್ಲಿ ವಿಶಾಲ್ ಟಿ.ಕೆ., ರಾಜೇಶ್ ರಮೇಶ್, ಅನ್ಸಾ ಬಾಬು, ರಶ್‌ದೀಪ್ ಕೌರ್ ಹಾಗೂ ನೀರು ಪಾಠಕ್ ಸ್ಥಾನ ಪಡೆದಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಉಪಾಧ್ಯಕ್ಷ ಹಾಗೂ ಮಾಜಿ AFI ಅಧ್ಯಕ್ಷ ಆದಿಲ್ ಸುಮರಿವಾಲಾ ಮಾತನಾಡಿ, ಫೆಡರೇಶನ್‌ನ ಆಯ್ಕೆ ನೀತಿಯ ಪ್ರಕಾರವೇ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

“ನಮಗೆ 32 ಅಥ್ಲೀಟ್‌ಗಳ ಕೋಟಾ ಇತ್ತು. ಅದರಲ್ಲಿ 22 ಪುರುಷರು ಮತ್ತು 10 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ವಿದೇಶಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಪೂರ್ವಾನುಮತಿ ಪಡೆದ ಅಥ್ಲೀಟ್‌ಗಳ ಸಾಧನೆಗಳನ್ನೂ ಪರಿಗಣಿಸಲಾಗಿದೆ,” ಎಂದು ಅವರು ತಿಳಿಸಿದರು.

ತಂಡದ ಘೋಷಣೆಯ ವೇಳೆ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯವೆಂದರೆ ನೀರಜ್ ಚೋಪ್ರಾ ಮತ್ತು ತ್ರಿಪಲ್ ಜಂಪರ್ ಸೆಲ್ವ ಪ್ರಭು ಅವರ ಷರತ್ತುಬದ್ಧ ಆಯ್ಕೆ. ಕಾಮನ್‌ವೆಲ್ತ್ ಗೇಮ್ಸ್‌ಗೂ ಮುನ್ನ ನಡೆಯುವ ಕೆಲವು ಸ್ಪರ್ಧೆಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಈ ಕುರಿತು ಸುಮರಿವಾಲಾ ಮಾತನಾಡಿ, “ಸೆಲ್ವ ಪ್ರಭು ಹಾಗೂ ನೀರಜ್ ಚೋಪ್ರಾ ಇಬ್ಬರೂ ತಮ್ಮ ಮುಂದಿನ ಸ್ಪರ್ಧೆಗಳ ಫಲಿತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ನೀರಜ್ ಕಾಮನ್‌ವೆಲ್ತ್ ಗೇಮ್ಸ್‌ಗೂ ಮುನ್ನ ಕೆಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದು, ಅರ್ಹತಾ ಮಾನದಂಡ ಪೂರೈಸಿದರೆ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ,” ಎಂದರು.

ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತದ ಒಟ್ಟು ಪದಕ ಪಟ್ಟಿಗೆ ಅಥ್ಲೆಟಿಕ್ಸ್ ತಂಡದಿಂದ ದೊಡ್ಡ ಕೊಡುಗೆ ನಿರೀಕ್ಷಿಸಲಾಗಿದೆ. ಅನುಭವಿಗಳ ಜೊತೆಗೆ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ವಿವಿಧ ವಿಭಾಗಗಳಲ್ಲಿ ಭಾರತದ ಪದಕ ಸಾಧ್ಯತೆಗಳನ್ನು ಹೆಚ್ಚಿಸುವ ಉದ್ದೇಶದಿಂದ ತಂಡವನ್ನು ರೂಪಿಸಲಾಗಿದೆ.

ಭಾರತೀಯ ತಂಡ:

ಪುರುಷರು:
ಗುರಿಂದರ್ವೀರ್ ಸಿಂಗ್ (100 ಮೀ.), ಅನಿಮೇಶ್ ಕುಜೂರ್ (200 ಮೀ.), ಗುಲ್ವೀರ್ ಸಿಂಗ್ (5000 ಮೀ., 10,000 ಮೀ.), ತೇಜಸ್ ಅಶೋಕ್ ಶಿರ್ಸೆ (110 ಮೀ. ಹರ್ಡಲ್ಸ್), ಯಶಸ್ ಪಿ. (400 ಮೀ. ಹರ್ಡಲ್ಸ್), ಸಂತೋಷ್ ಕುಮಾರ್ ತಮಿಳರಸನ್ (400 ಮೀ. ಹರ್ಡಲ್ಸ್), ಸರ್ವೇಶ್ ಅನಿಲ್ ಕುಶಾರೆ (ಹೈ ಜಂಪ್), ಆದರ್ಶ್ ರಾಮ್ ಜೆ. (ಹೈ ಜಂಪ್), ದೇವ್ ಮೀನಾ (ಪೋಲ್ ವಾಲ್ಟ್), ಕುಲದೀಪ್ ಕುಮಾರ್ (ಪೋಲ್ ವಾಲ್ಟ್), ಎಂ. ಶ್ರೀಶಂಕರ್ (ಲಾಂಗ್ ಜಂಪ್), ಲೋಕೇಶ್ ಸತ್ಯನಾಥನ್ (ಲಾಂಗ್ ಜಂಪ್), ಪ್ರವೀಣ್ ಚಿತ್ರವೇಲ್ (ಟ್ರಿಪಲ್ ಜಂಪ್), ಸೆಲ್ವ ಪ್ರಭು* (ಟ್ರಿಪಲ್ ಜಂಪ್), ಸಮರ್‌ದೀಪ್ ಸಿಂಗ್ ಗಿಲ್ (ಶಾಟ್‌ಪುಟ್), ತಜಿಂದರ್‌ಪಾಲ್ ಸಿಂಗ್ ತೂರ್ (ಶಾಟ್‌ಪುಟ್), ನೀರಜ್ ಚೋಪ್ರಾ* (ಜಾವೆಲಿನ್ ಥ್ರೋ), ರೋಹಿತ್ ಯಾದವ್ (ಜಾವೆಲಿನ್ ಥ್ರೋ), ಯಶ್ ವೀರ್ ಸಿಂಗ್ (ಜಾವೆಲಿನ್ ಥ್ರೋ), ತೇಜಸ್ವಿನ್ ಶಂಕರ್ (ಡೆಕಾಥ್ಲಾನ್, ಹೈ ಜಂಪ್).

ಮಹಿಳೆಯರು:
ಪಾರುಲ್ ಚೌಧರಿ (3000 ಮೀ. ಸ್ಟೀಪಲ್‌ಚೇಸ್, 5000 ಮೀ.), ಪೂಜಾ (ಹೈ ಜಂಪ್), ಮನ್‌ಪ್ರೀತ್ ಕೌರ್ (ಶಾಟ್‌ಪುಟ್), ಸೀಮಾ (ಡಿಸ್ಕಸ್ ಥ್ರೋ), ನಿಧಿ ರಾಣಿ (ಡಿಸ್ಕಸ್ ಥ್ರೋ), ರವೀನಾ (10,000 ಮೀ. ರೇಸ್ ವಾಕ್), ಪ್ರಿಯಾಂಕಾ (10,000 ಮೀ. ರೇಸ್ ವಾಕ್).

ಮಿಶ್ರ 4×400 ಮೀ. ರಿಲೇ ತಂಡ:
ವಿಶಾಲ್ ಟಿ.ಕೆ., ರಾಜೇಶ್ ರಮೇಶ್, ಅನ್ಸಾ ಬಾಬು, ರಶ್‌ದೀಪ್ ಕೌರ್, ನೀರು ಪಾಠಕ್.

  • ನೀರಜ್ ಚೋಪ್ರಾ ಮತ್ತು ಸೆಲ್ವ ಪ್ರಭು ಅವರ ಆಯ್ಕೆ ಕಾಮನ್‌ವೆಲ್ತ್ ಗೇಮ್ಸ್‌ಗೂ ಮುನ್ನದ ಪ್ರದರ್ಶನದ ಆಧಾರದ ಮೇಲೆ ಅಂತಿಮಗೊಳ್ಳಲಿದೆ.

More like this
Related

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ತುಳು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಣೆ

ಮಂಗಳೂರು: ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಮಹತ್ವದ ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ...

ಲಾಹೋರ್ ಸಭೆಗಳು: ಭಾರತಕ್ಕೆ ಬಹುಮುಖ ಮಾದಕವಸ್ತು ಕಳ್ಳಸಾಗಣೆ ಹೆಚ್ಚಿಸಲು ಐಎಸ್‌ಐ ಯೋಜನೆ?

ನವದೆಹಲಿ: ಮಾದಕವಸ್ತುಗಳ ವಿರುದ್ಧದ ಹೋರಾಟವು 2026-29ರ ಅವಧಿಯಲ್ಲಿ ತೀವ್ರ ‘ಮಿಷನ್ ಮೋಡ್’ಗೆ...

ಮಣಿಪಾಲದಲ್ಲಿ 30 ಗ್ರಾಂ MDMA ಸಹಿತ ಇಬ್ಬರ ಬಂಧನ

ಉಡುಪಿ: ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ...

ಗಣೇಶನನ್ನು ಪೂಜಿಸುವುದು ಪ್ರಕೃತಿಯ ಆರಾಧನೆ: ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ ಅಭಿಪ್ರಾಯ

ಉಡುಪಿ: ನಾವಿರುವ ಪ್ರಕೃತಿಯೇ ದೇವರಾಗಿದೆ. ದೇವಿ ಪಾರ್ವತಿಯ ಮೂಲಕ ಪ್ರಕೃತಿಯಲ್ಲಿ ಜನಿಸಿದ...

Copying is disabled on Udupi Digital News.