ನವದೆಹಲಿ: ನೀಟ್ ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳ ಆತಂಕಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಕ್ಷಣವೇ ಅರ್ಥಪೂರ್ಣ ಸಂವಾದ ಆರಂಭಿಸಬೇಕು. ಪಾರದರ್ಶಕತೆಯನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಶೀಘ್ರ ಹಾಗೂ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ವಿ ದ ಲೀಡರ್ ಚಳುವಳಿಯ ನಾಯಕ ಕೆ ಅಣ್ಣಾಮಲೈ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ದೇಶಾದ್ಯಂತ ವೈದ್ಯಕೀಯ ಪ್ರವೇಶಕ್ಕೆ ಏಕರೂಪದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಜಾರಿಗೊಂಡಿರುವ ನೀಟ್ (NEET) ಪರೀಕ್ಷೆಯನ್ನು ಹಲವು ವರ್ಷಗಳಿಂದ ವೈಯಕ್ತಿಕವಾಗಿ ಬೆಂಬಲಿಸಿದ್ದೇನೆ. ಇದು ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಕನಸು ನನಸಾಗಿಸಲು ಸಮಾನ ಅವಕಾಶ ಒದಗಿಸಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ನೀಟ್ ಯುಜಿ ಪ್ರಶ್ನೆಪತ್ರಿಕೆ ಮೂರು ಬಾರಿ ಸೋರಿಕೆಯಾಗಿರುವುದು ವಿದ್ಯಾರ್ಥಿಗಳ ವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿದೆ.
ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಈಗಾಗಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷಾ ಪ್ರಕ್ರಿಯೆಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ದೇಶಾದ್ಯಂತ ಏಕರೂಪತೆ ತರಬೇಕಿದ್ದ ವ್ಯವಸ್ಥೆಯೇ ವಿಫಲವಾಗಿರುವುದು ವಿದ್ಯಾರ್ಥಿಗಳ ಮೇಲೆ ಅಪಾರ ಮಾನಸಿಕ ಒತ್ತಡ ಉಂಟುಮಾಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಯಾವುದೇ ಹೊಣೆಗಾರಿಕೆಯನ್ನು ನಿಗದಿಪಡಿಸದಿರುವುದು ವಿದ್ಯಾರ್ಥಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ತಮ್ಮ ನೋವನ್ನು ವ್ಯಕ್ತಪಡಿಸಲು ಅವರು ಬೀದಿಗಿಳಿಯುವಂತಾಯಿತು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಆದರೆ ಪ್ರತಿಭಟನಾಕಾರರೊಂದಿಗೆ ಸಂವಾದ ಆರಂಭಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಷ್ಟು ವಿಳಂಬ ಏಕೆ ಮಾಡಿತು ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವವರೆಗೆ ಸರ್ಕಾರ ಅರ್ಥಪೂರ್ಣ ಮಾತುಕತೆಗೆ ಮುಂದಾಗದಿರುವುದು ಏಕೆ ಎಂಬ ಪ್ರಶ್ನೆಯನ್ನೂ ಮೂಡುತ್ತಿದೆ.
ಇದೇ ವೇಳೆ, ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಸಂಘಟಕರಿಗೂ ಜವಾಬ್ದಾರಿ ಇದೆ ಎಂದು ಹೇಳಲಾಗಿದೆ. ಹಲವು ವಾರಗಳ ಕಾಲ ಪ್ರತಿಭಟನೆ ಮುಂದುವರಿದಾಗ, ಸ್ವಹಿತಾಸಕ್ತಿಯುಳ್ಳ ಕೆಲವರು ಮೂಲ ಬೇಡಿಕೆಗಳಿಗೆ ಸಂಬಂಧವಿಲ್ಲದ ವಿಚಾರಗಳನ್ನು ಮುಂದಿಟ್ಟು ಅಥವಾ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಪ್ರಯತ್ನಗಳನ್ನು ಮೌನವಾಗಿ ಒಪ್ಪಿಕೊಂಡರೆ ಪ್ರತಿಭಟನೆಯ ಮೂಲ ಉದ್ದೇಶದಿಂದ ದಾರಿ ತಪ್ಪುವ ಅಪಾಯವಿದೆ. ಆದ್ದರಿಂದ ಮೂಲ ಬೇಡಿಕೆಗಳ ಮೇಲೆ ಕೇಂದ್ರೀಕೃತವಾಗಿ ಹೋರಾಟ ಮುಂದುವರಿಯಬೇಕು.
ವಿದ್ಯಾರ್ಥಿಗಳ ಆತಂಕಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಕ್ಷಣವೇ ಅರ್ಥಪೂರ್ಣ ಸಂವಾದ ಆರಂಭಿಸಬೇಕು. ಪಾರದರ್ಶಕತೆಯನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಶೀಘ್ರ ಹಾಗೂ ಸೂಕ್ತ ಪರಿಹಾರ ಕಲ್ಪಿಸಬೇಕು.
ಯಾವುದೇ ರಾಷ್ಟ್ರದ ಶಕ್ತಿ ಅದರ ಯುವಜನತೆ ತಮ್ಮ ಸಂಸ್ಥೆಗಳ ಮೇಲೆ ಇಡುವ ವಿಶ್ವಾಸದಲ್ಲಿದೆ. ಶಿಕ್ಷಣ ವ್ಯವಸ್ಥೆಯ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯ ಮೇಲಿನ ನಂಬಿಕೆಯನ್ನು ವಿದ್ಯಾರ್ಥಿಗಳು ಕಳೆದುಕೊಂಡರೆ, ಅದು ದೇಶದ ಭವಿಷ್ಯವನ್ನೇ ಅಪಾಯಕ್ಕೆ ತಳ್ಳುವಂತಾಗುತ್ತದೆ ಎಂದು ಅಣ್ಣಾಮಲೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




