ಕೌಲಾಲಂಪುರ: ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿಯಾದ ಹರಿಹರನ್ ಅಂಶಕರುಣನ್ ಮತ್ತು ಎಂಆರ್ ಅರ್ಜುನ್ ಭರ್ಜರಿ ಅಚ್ಚರಿ ಫಲಿತಾಂಶ ದಾಖಲಿಸಿದ್ದಾರೆ.
ಏಳನೇ ಶ್ರೇಯಾಂಕದ ಕ್ರಿಸ್ಟೋ ಪೊಪೊವ್ ಮತ್ತು ತೋಮಾ ಜೂನಿಯರ್ ಪೊಪೊವ್ ಸಹೋದರರ ವಿರುದ್ಧ ಕಣಕ್ಕಿಳಿದ ಭಾರತೀಯ ಜೋಡಿ 21-19, 21-15 ಅಂತರದಲ್ಲಿ ನೇರ ಗೇಮ್‌ಗಳಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದೆ.
ಯುರೋಪಿಯನ್ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತರಾದ ಪೋಪೊವ್ ಸಹೋದರರ ವಿರುದ್ಧ ಭಾರತೀಯ ಜೋಡಿ ಅಂಡರ್‌ಡಾಗ್ ಆಗಿ ಕಣಕ್ಕಿಳಿದಿದ್ದರೂ, ಶಾಂತ ಮತ್ತು ಆತ್ಮವಿಶ್ವಾಸಭರಿತ ಆಟದ ಮೂಲಕ ಗೆಲುವು ಸಾಧಿಸಿತು.
ಮೊದಲ ಗೇಮ್‌ನಲ್ಲಿ ಎರಡೂ ಜೋಡಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಆದರೆ ನಿರ್ಣಾಯಕ ಕ್ಷಣಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಹರಿಹರನ್-ಅರ್ಜುನ್ ಜೋಡಿ ಗೇಮ್ ತಮ್ಮದಾಗಿಸಿಕೊಂಡಿತು. ಎರಡನೇ ಗೇಮ್‌ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದ ಭಾರತೀಯರು ಸುಲಭವಾಗಿ ಪಂದ್ಯ ಮುಗಿಸಿದರು.
ಕಳೆದ ಒಂದು ವರ್ಷದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಈ ಜೋಡಿ, ಕಳೆದ ನವೆಂಬರ್‌ನಲ್ಲಿ ತೆಲಂಗಾಣ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಪ್ರಶಸ್ತಿಯನ್ನು ಗೆದ್ದಿತ್ತು. ಜೊತೆಗೆ ಟರ್ಕಿಯೆ ಇಂಟರ್‌ನ್ಯಾಷನಲ್ ಚಾಲೆಂಜ್ ಹಾಗೂ ಅಲ್ ಐನ್ ಮಾಸ್ಟರ್ಸ್ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿತ್ತು. ಈ ಸೀಸನ್ ಆರಂಭದಲ್ಲೇ ಸೇಂಟ್ ಡೆನಿಸ್ ರಿಯೂನಿಯನ್ ಓಪನ್ ಪ್ರಶಸ್ತಿಯನ್ನೂ ಗೆದ್ದಿತ್ತು.
ಪ್ರಸ್ತುತ ವಿಶ್ವ ರ್ಯಾಂಕಿಂಗ್‌ನಲ್ಲಿ 31ನೇ ಸ್ಥಾನದಲ್ಲಿರುವ ಭಾರತೀಯ ಜೋಡಿಗೆ, ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟಾಪ್-30 ಪ್ರವೇಶಿಸುವ ಅವಕಾಶ ಇದೆ.
ಮುಂದಿನ ಸುತ್ತಿನಲ್ಲಿ ಹರಿಹರನ್-ಅರ್ಜುನ್ ಜೋಡಿ ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಂಡೋ – ಡೇನಿಯಲ್ ಮಾರ್ಟಿನ್ ಜೋಡಿ ಅಥವಾ ಚೀನಾದ ಹು ಕೆ ಯುವಾನ್ ಮತ್ತು ಲಿನ್ ಶಿಯಾಂಗ್ ಯಿ ವಿರುದ್ಧ ಸೆಣಸಲಿದೆ.
ಇನ್ನೊಂದೆಡೆ, ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಾಥ್ವಿಕ್ ಕನಪುರಂ ಮತ್ತು ರಾಧಿಕಾ ಶರ್ಮಾ ಜೋಡಿ ಮಲೇಷ್ಯಾದ ದತು ಅಸ್ರಾಹ್ ಮತ್ತು ಕ್ಲಾರಿಸ್ಸಾ ಸಾನ್ ವಿರುದ್ಧ ಗೆದ್ದು ಕ್ವಾಲಿಫೈಯಿಂಗ್ ಸುತ್ತು ದಾಟಿತು.
ಮಹಿಳಾ ಸಿಂಗಲ್ಸ್ ಕ್ವಾಲಿಫೈಯಿಂಗ್‌ನಲ್ಲಿ ಅಶ್ಮಿತಾ ಚಾಲಿಹಾ ಚೈನೀಸ್ ತೈಪೆಯ ಪೈ ಯು ಪೋ ವಿರುದ್ಧ ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿದರೆ, ಆಕರ್ಷಿ ಕಶ್ಯಪ್ ದಕ್ಷಿಣ ಕೊರಿಯಾದ ಪಾರ್ಕ್ ಗಾ ಯುನ್ ವಿರುದ್ಧ ಸೋತು ಹೊರಬಿದ್ದರು.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ ಜೋಡಿ ಕೆನಡಾದ ಜಾಕಿ ಡೆಂಟ್ ಮತ್ತು ಕ್ರಿಸ್ಟಲ್ ಲೈ ವಿರುದ್ಧ ಸೋಲು ಅನುಭವಿಸಿತು.
ಇದೇ ವೇಳೆ, ಭಾರತದ ಪ್ರಮುಖ ಡಬಲ್ಸ್ ಜೋಡಿಯಾದ Satwiksairaj Rankireddy ಮತ್ತು Chirag Shetty ಥಾಯ್ಲೆಂಡ್ ಓಪನ್‌ನಲ್ಲಿ ರನ್ನರ್-ಅಪ್ ಆದ ಬಳಿಕ ಕಾರ್ಯಭಾರ ನಿರ್ವಹಣೆಯ ಭಾಗವಾಗಿ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಿಂದ ದೂರ ಉಳಿದಿದ್ದಾರೆ.




