ಶಿವಮೊಗ್ಗ: ವಿಶಾಲ್ ಮಾರ್ಟ್‌ನಲ್ಲಿ ಸಿಲುಕಿದ್ದ 9 ಮಂದಿ ರಕ್ಷಣೆ: ನಗರದ ವಿಶಾಲ್ ಮಾರ್ಟ್‌ನಲ್ಲಿ ಲಿಫ್ಟ್ ದೋಷ ಉಂಟಾಗಿ ಅದರೊಳಗೆ ಸಿಲುಕಿದ್ದ 9 ಮಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ನಡೆದಿದೆ.
ಸೋಮವಾರ ಸಾಮಾನ್ಯ ದಿನದಂತೆ ಗ್ರಾಹಕರು ಶಾಪಿಂಗ್‌ಗೆ ಆಗಮಿಸಿದ್ದರು. ಶಾಪಿಂಗ್ ಮುಗಿಸಿ ಕೆಳ ಮಹಡಿಗೆ ಇಳಿಯುವ ವೇಳೆ ಲಿಫ್ಟ್ ಏಕಾಏಕಿ ಕೈಕೊಟ್ಟು ನಿಂತ ಪರಿಣಾಮ ಒಳಗಿದ್ದವರು ಆತಂಕಕ್ಕೊಳಗಾದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ಕಾರ್ಯಾಚರಣೆ ನಡೆಸಿದರು. ಬಳಿಕ ಎಮರ್ಜೆನ್ಸಿ ಡೋರ್ ಮೂಲಕ ಲಿಫ್ಟ್‌ನೊಳಗಿದ್ದ ಎಲ್ಲಾ 9 ಮಂದಿಯನ್ನು ಸುರಕ್ಷಿತವಾಗಿ ಹೊರತೆಗೆದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ರಾಜು, ಡಿಎಫ್‌ಒ ಅಶೋಕ್ ಕುಮಾರ್, ಮುಕ್ತಮ್ ಹುಸೇನ್, ಸುನೀಲ್, ಸತೀಶ್, ಸಂತೋಷ್ ಹಾಗೂ ಮನೋಜ್ ಭಾಗವಹಿಸಿದ್ದರು.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.




