Tuesday, September 15, 2026

ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆರ್ಭಟ: 13 ಮಂದಿ ಸಾವು, 10 ಮಂದಿಗೆ ಗಾಯ; ಗಿರಿಧಾಮಗಳಿಗೆ ‘ರೆಡ್ ಅಲರ್ಟ್’

ಮುಂಬೈ, ಜು.7: ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದ ಭಾರೀ ಅನಾಹುತ ಸಂಭವಿಸಿದ್ದು, 13 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ನೀಡಿರುವ ಮಾಹಿತಿಯ ಪ್ರಕಾರ ಸುಮಾರು 100ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಪ್ರವಾಹದಿಂದ ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ.

ಕಳೆದ 24ರಿಂದ 48 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ಪಶ್ಚಿಮ ಮಹಾರಾಷ್ಟ್ರದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಲೋಣಾವಾಲಾದಲ್ಲಿ 48 ಗಂಟೆಗಳಲ್ಲಿ 625 ಮಿ.ಮೀ. ಮಳೆಯಾಗಿದೆ. ರೈಗಡದಲ್ಲಿ 236 ಮಿ.ಮೀ., ಠಾಣೆಯಲ್ಲಿ 161 ಮಿ.ಮೀ., ರತ್ನಗಿರಿಯಲ್ಲಿ 152 ಮಿ.ಮೀ., ಪಾಲ್ಘರ್‌ನಲ್ಲಿ 132 ಮಿ.ಮೀ. ಹಾಗೂ ಮುಂಬೈ ನಗರದ ವಿವಿಧ ಭಾಗಗಳಲ್ಲಿ 100ರಿಂದ 161 ಮಿ.ಮೀ.ವರೆಗೆ ಮಳೆಯಾಗಿದೆ.

ರಾಜ್ಯದ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಉಲ್ಹಾಸ್, ಕಾಲು ಹಾಗೂ ಪಿಂಜಲ್ ನದಿಗಳು ಎಚ್ಚರಿಕೆ ಮಟ್ಟ ದಾಟಿದ್ದು, ಅಂಬಾ, ಸಾವಿತ್ರಿ, ಕುಂಡಲಿಕಾ, ಪಾತಾಳಗಂಗಾ, ಜಗ್ಬುಡಿ ಹಾಗೂ ಉಲ್ಹಾಸ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಬದ್ಲಾಪುರ, ಮೊಹಾನೆ ಹಾಗೂ ಜಾಂಭುಲ್ಪಾಡ ಪ್ರದೇಶಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ.

ಭಾರೀ ಮಳೆಯಿಂದ ವಿವಿಧ ಜಿಲ್ಲೆಗಳಲ್ಲಿ ದುರ್ಘಟನೆಗಳು ಸಂಭವಿಸಿವೆ. ಮುಂಬೈನ ಮಾನ್ಖುರ್ಡ್ ಪ್ರದೇಶದಲ್ಲಿ ಕಟ್ಟಡ ಕುಸಿದು ಬಡಾವಣೆಯ ಮೇಲೆ ಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ನಗರ ಉಪನಗರ ಪ್ರದೇಶದಲ್ಲಿ ಮರ ಬಿದ್ದು ಮತ್ತೊಬ್ಬರು ಮೃತಪಟ್ಟಿದ್ದಾರೆ.

ಠಾಣೆಯಲ್ಲಿ ಕಟ್ಟಡದ ಒಂದು ಭಾಗ ಕುಸಿದು ಇಬ್ಬರು ಗಾಯಗೊಂಡಿದ್ದಾರೆ. ಪಾಲ್ಘರ್ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ತಲಾ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಿಂಧುದುರ್ಗದಲ್ಲಿ ಬಿರುಗಾಳಿಯಿಂದ 30 ಮನೆಗಳು ಕುಸಿದಿವೆ. ಸತಾರಾ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ನಿರಂತರ ಮಳೆಯಿಂದ ಭೂಕುಸಿತದ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾಥೆರಾನ್, ಲೋಣಾವಾಲಾ, ಖೋಪೋಲಿ ಹಾಗೂ ಲೋಹಗಡ ಗಿರಿಧಾಮಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಈ ಪ್ರದೇಶಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ ಎರಡು ತಂಡಗಳನ್ನು ನಿಯೋಜಿಸಲಾಗಿದೆ.

ಪುಣೆ ಜಿಲ್ಲೆಯ ಮಾವಲ್ ತಾಲ್ಲೂಕಿನ ಪಾಟಣ ಗ್ರಾಮದಲ್ಲಿ ಭೂಕುಸಿತದಿಂದ ಮನೆಯೊಳಗೆ ಸಿಲುಕಿದ್ದ ನಾಲ್ವರನ್ನು ರಕ್ಷಿಸಲಾಗಿದೆ. ಮತ್ತೊಂದೆಡೆ ತಳೇಗಾಂವ್-ದಾಭಾಡೆ ಸಮೀಪ ಪ್ರವಾಹದ ನೀರಿನಲ್ಲಿ ಸಿಲುಕಿದ್ದ 25 ಪ್ರಯಾಣಿಕರಿದ್ದ ಬಸ್‌ನಲ್ಲಿದ್ದ ಎಲ್ಲರನ್ನು ಎನ್‌ಡಿಆರ್‌ಎಫ್ ಸುರಕ್ಷಿತವಾಗಿ ರಕ್ಷಿಸಿದೆ.

ರೈಗಡ ಜಿಲ್ಲೆಯ ಸುಧಾಗಡ ತಾಲ್ಲೂಕಿನಲ್ಲಿ ಪ್ರವಾಹದ ನೀರಿನಿಂದ ಮನೆಯ ಮೇಲ್ಛಾವಣಿಯಲ್ಲಿ ಸಿಲುಕಿದ್ದ ಆರು ಮಂದಿ ಕುಟುಂಬ ಸದಸ್ಯರನ್ನು, ಅದರಲ್ಲಿ ಆರು ತಿಂಗಳ ಮಗು ಕೂಡ ಸೇರಿದ್ದು, ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಭೂಕುಸಿತ ಹಾಗೂ ಜಲಾವೃತದಿಂದ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯ ಕಾಶೇಡಿ ಘಾಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಖೋಪೋಲಿ ಹೆದ್ದಾರಿಗಳಲ್ಲೂ ಭೂಕುಸಿತ ಹಾಗೂ ನೀರು ನಿಂತ ಕಾರಣ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮಧ್ಯಾಹ್ನದ ಬಳಿಕ ಸಂಚಾರವನ್ನು ಪುನಃ ಆರಂಭಿಸಲಾಯಿತು.

ಮಾವಲ್ ಮತ್ತು ತಾಮ್ಹಿಣಿ ಘಾಟ್ ಪ್ರದೇಶಗಳಲ್ಲೂ ಭೂಕುಸಿತದಿಂದ ವಾಹನ ಸಂಚಾರವನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿದೆ.

ಇದೇ ವೇಳೆ, ರಾಜ್ಯದ ಇತರೆ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದರೂ ವಿದರ್ಭ ಪ್ರದೇಶದಲ್ಲಿ ಇನ್ನೂ ಮಳೆಯ ಲಕ್ಷಣ ಕಾಣಿಸಿಕೊಂಡಿಲ್ಲ. ವರ್ಧಾ, ಅಕೋಲಾ, ಅಮರಾವತಿ, ಯವತ್ಮಾಳ ಹಾಗೂ ಚಂದ್ರಪುರ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಮಳೆಯಾಗಿಲ್ಲ.

More like this
Related

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರ ಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ

ಉಡುಪಿ: ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ...

ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಸಿ ಡಿಸೋಜಾ

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ...

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ಆಘಾತಕಾರಿ ಫಲಿತಾಂಶ: ಹೆಂಡತಿ, ಅಪ್ಪ, ಅಮ್ಮನ ವೋಟ್ ಯಾರಿಗೆ?

ಜೈಪುರ: ರಾಜಸ್ಥಾನ ನಾಗರಿಕ ಚುನಾವಣೆಯ ಫಲಿತಾಂಶದ ನಡುವೆ ಆಘಾತಕಾರಿ ಮತ್ತು ಆಸಕ್ತಿದಾಯಕ...

Copying is disabled on Udupi Digital News.