Monday, September 14, 2026

ಜೈಶಂಕರ್ ಭೇಟಿಯಾದ ನೇಪಾಳದ ಆಡಳಿತ ಪಕ್ಷದ ಮುಖ್ಯಸ್ಥ ರವಿ ಲಮಿಚ್ಛಾನೆ; ಭಾರತ-ನೇಪಾಳ ಬಾಂಧವ್ಯ ಬಲಪಡಿಸುವ ಕುರಿತು ಚರ್ಚೆ

ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ನವದೆಹಲಿಯಲ್ಲಿ ನೇಪಾಳದ ಆಡಳಿತಾರೂಢ ರಾಷ್ತ್ರಿಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ಅಧ್ಯಕ್ಷ ರವಿ ಲಮಿಚ್ಛಾನೆ ಹಾಗೂ ಅವರ ನಿಯೋಗವನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಸಭೆಯ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್, “ನೇಪಾಳದ ರಾಷ್ತ್ರಿಯ ಸ್ವತಂತ್ರ ಪಕ್ಷದ ಅಧ್ಯಕ್ಷ ರವಿ ಲಮಿಚ್ಛಾನೆ ಮತ್ತು ಅವರ ನಿಯೋಗವನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದು ಸಂತೋಷದ ಸಂಗತಿ. ಭಾರತ-ನೇಪಾಳ ಅಭಿವೃದ್ಧಿ ಸಹಭಾಗಿತ್ವ ಹಾಗೂ ಜನರ ನಡುವಿನ ಬಾಂಧವ್ಯದ ಕುರಿತು ಚರ್ಚೆ ನಡೆಸಿದ್ದೇವೆ. ಈ ಸಂಬಂಧಗಳು ಎರಡೂ ದೇಶಗಳ ಅಭಿವೃದ್ಧಿ ಮತ್ತು ಸಮೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತವೆ,” ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ನೇಪಾಳದ ನಿಯೋಗದೊಂದಿಗೆ ಸಂವಾದ ನಡೆಸಿ, ಪಕ್ಷದ ಸೈದ್ಧಾಂತಿಕ ನೆಲೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮಾದರಿಯ ಕುರಿತು ಮಾಹಿತಿ ಹಂಚಿಕೊಂಡರು.

‘ನೋ ಬಿಜೆಪಿ’ (Know BJP) ಕಾರ್ಯಕ್ರಮದ ಅಂಗವಾಗಿ ನಡೆದ ಈ ಭೇಟಿಯಲ್ಲಿ, ನಿತಿನ್ ನಬಿನ್ ಅವರು ಪಕ್ಷದ ಸಂಘಟನಾ ರಚನೆ ಮತ್ತು ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವ ವಿಧಾನಗಳ ಬಗ್ಗೆ ವಿವರಿಸಿದರು.

ರಾಷ್ಟ್ರೀಯ ಮಟ್ಟದಿಂದ ಬೂತ್ ಮಟ್ಟದವರೆಗೆ ಬಿಜೆಪಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ ಅವರು, ಜನರ ಸಮಸ್ಯೆಗಳನ್ನು ತಳಮಟ್ಟದಲ್ಲೇ ಪರಿಹರಿಸಲು ಬಿಜೆಪಿ ಕಾರ್ಯಕರ್ತರು ವಹಿಸುವ ಪಾತ್ರವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ರಾಜಕೀಯದಲ್ಲಿ ಯುವಜನರ, ವಿಶೇಷವಾಗಿ ‘ಜೆನ್-ಝಡ್’ ಪೀಳಿಗೆಯ ಪಾತ್ರದ ಕುರಿತು ಎರಡೂ ಕಡೆಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಪ್ರಜಾಪ್ರಭುತ್ವದಲ್ಲಿ ಯುವಕರ ಭಾಗವಹಿಸುವಿಕೆ, ಸಾರ್ವಜನಿಕ ಅಭಿಪ್ರಾಯ ರೂಪಿಸುವಿಕೆ ಹಾಗೂ ಭವಿಷ್ಯದ ರಾಜಕೀಯ ನಾಯಕತ್ವದ ಕುರಿತು ಚರ್ಚೆ ನಡೆಯಿತು.

ಭಾರತ ಮತ್ತು ನೇಪಾಳದ ನಡುವಿನ ಸಂಬಂಧಗಳು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ನಾಗರಿಕತೆಯ ಪರಂಪರೆಯ ಮೇಲೆ ನಿರ್ಮಾಣಗೊಂಡಿವೆ ಎಂದು ನಿತಿನ್ ನಬಿನ್ ಹೇಳಿದರು. ಇಂತಹ ಸಂವಾದಗಳು ಎರಡೂ ದೇಶಗಳ ರಾಜಕೀಯ ಪಕ್ಷಗಳ ನಡುವೆ ಪ್ರಜಾಪ್ರಭುತ್ವದ ಚರ್ಚೆ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.

ಭೇಟಿಯ ಭಾಗವಾಗಿ ನೇಪಾಳದ ನಿಯೋಗವು ಬಿಜೆಪಿ ಮಾಧ್ಯಮ ಕೇಂದ್ರ ಹಾಗೂ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ, ಪಕ್ಷದ ಸಂವಹನ ಮತ್ತು ಜ್ಞಾನ ನಿರ್ವಹಣಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು.

ಸಂವಾದದ ಅಂತ್ಯದಲ್ಲಿ ನಡೆದ ಭೋಜನ ಕೂಟದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಂಸದರಾದ ಮನೋಜ್ ತಿವಾರಿ, ರಾಮವೀರ್ ಸಿಂಗ್ ಬಿಧುರಿ, ಪ್ರವೀಣ್ ಖಂಡೇಲ್ವಾಲ್ ಹಾಗೂ ಕೇಂದ್ರ ಸಚಿವ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ಹರ್ಷ್ ಮಲ್ಹೋತ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

Copying is disabled on Udupi Digital News.