ಮುಂಬೈ: ಮುಂಬೈನ ಧಾರಾವಿ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡವೊಂದರಲ್ಲಿ LPG ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಘಟನೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾವಿಯ ರಾಜೀವ್ ಗಾಂಧಿ ಸ್ಪೋರ್ಟ್ಸ್ ಕ್ಲಬ್ ಸಮೀಪದ ರಾಜೀವ್ ಗಾಂಧಿ ನಗರದಲ್ಲಿರುವ ಸಿಯಾನ್–ಧಾರಾವಿ ಲಿಂಕ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
LPG ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನವೇ ಬೆಂಕಿಯನ್ನು ನಂದಿಸಿದ್ದಾರೆ ಎಂದು ಬೃಹನ್‌ಮುಂಬೈ ಮಹಾನಗರ ಪಾಲಿಕೆಯ (BMC) ಮುಂಬೈ ಅಗ್ನಿಶಾಮಕ ದಳ ತಿಳಿಸಿದೆ.
ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಅಗ್ನಿಶಾಮಕ ದಳ ಆಗಮಿಸುವ ಮುನ್ನವೇ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಮುಂಬೈ ಅಗ್ನಿಶಾಮಕ ದಳ, ಪೊಲೀಸರು ಹಾಗೂ BEST ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು.
ಅಗ್ನಿಶಾಮಕ ದಳದ ಪ್ರಕಾರ, ರಾತ್ರಿ 12.10ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.
ಗಾಯಗೊಂಡವರಲ್ಲಿ ನಾಲ್ಕು ಮತ್ತು ಐದು ವರ್ಷದ ಇಬ್ಬರು ಬಾಲಕರು ಸೇರಿದ್ದಾರೆ. ನಾಲ್ಕು ವರ್ಷದ ಬಾಲಕನಿಗೆ ಶೇ.8ರಷ್ಟು ಸುಟ್ಟ ಗಾಯಗಳಾಗಿದ್ದರೆ, ಐದು ವರ್ಷದ ಬಾಲಕನಿಗೆ ಶೇ.5ರಷ್ಟು ಸುಟ್ಟ ಗಾಯಗಳಾಗಿವೆ. ಇನ್ನುಳಿದ ಇಬ್ಬರಿಗೆ ಕ್ರಮವಾಗಿ ಶೇ.15 ಮತ್ತು ಶೇ.30ರಷ್ಟು ಸುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇದೇ ವೇಳೆ, ಕಳೆದ ತಿಂಗಳು ಮುಂಬೈನ ಕಂದಿವಲಿ ಪಶ್ಚಿಮದ ಕಂದಿವಲಿ ಸ್ಟೇಷನ್ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಲೆವೆಲ್-1 ಬೆಂಕಿ ಅವಘಡ ಸಂಭವಿಸಿತ್ತು.
ಅಗ್ನಿ ಅವಘಡದ ವೇಳೆ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಲಾಡ್ಜಿಂಗ್ ಹೌಸ್‌ನಿಂದ 11 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು ಎಂದು BMC ಮುಂಬೈ ಅಗ್ನಿಶಾಮಕ ದಳ ತಿಳಿಸಿತ್ತು.
ಬೆಂಕಿ ಅವಘಡದ ಕುರಿತು ಮುಂಬೈ ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಮುಂಜಾನೆ 4.14ರ ಸುಮಾರಿಗೆ ಮಾಹಿತಿ ಬಂದಿತ್ತು. ಕಂದಿವಲಿ ಸ್ಟೇಷನ್ ರಸ್ತೆಯಲ್ಲಿರುವ ಅಭಿರಾಯ್ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಅಗ್ನಿಶಾಮಕ ದಳದ ಪ್ರಕಾರ, ಕಟ್ಟಡದ ವಿದ್ಯುತ್ ವೈರ್‌ಗಳು, ವಿದ್ಯುತ್ ಉಪಕರಣಗಳು, ಮರದ ಪೀಠೋಪಕರಣಗಳು, ಟಾರ್ಪಾಲಿನ್, ಬಿದಿರು ಹಾಗೂ ಪಕ್ಕದಲ್ಲಿದ್ದ ತಾತ್ಕಾಲಿಕ ಹಣ್ಣಿನ ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ಸೀಮಿತವಾಗಿತ್ತು.
ನಾಲ್ಕನೇ ಮಹಡಿಯ ಸುಮಾರು 50 ಚದರ ಅಡಿ ಪ್ರದೇಶದಲ್ಲಿದ್ದ ಬಟ್ಟೆ, ಮರದ ಪೀಠೋಪಕರಣಗಳು ಹಾಗೂ ಫಾಲ್ಸ್ ಸೀಲಿಂಗ್‌ಗೂ ಬೆಂಕಿಯ ಪರಿಣಾಮ ಉಂಟಾಗಿತ್ತು. ಕಟ್ಟಡದ ಹೊರಭಾಗದಲ್ಲಿದ್ದ ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ ಅಲಂಕಾರಿಕ ಶೀಟ್‌ಗಳಿಗೂ ಹಾನಿಯಾಗಿತ್ತು.
ಬೇಸ್‌ಮೆಂಟ್, ನೆಲ ಮಹಡಿ ಹಾಗೂ ನಾಲ್ಕು ಮೇಲಿನ ಮಹಡಿಗಳನ್ನು ಹೊಂದಿರುವ ವಾಣಿಜ್ಯ ಕಟ್ಟಡ ಇದಾಗಿದ್ದು, ಬೆಂಕಿ ಅವಘಡದ ಸಂದರ್ಭದಲ್ಲಿ ಇಡೀ ಕಟ್ಟಡ ಹೊಗೆಯಿಂದ ಆವೃತವಾಗಿತ್ತು.




