ಪುಣೆ: ಮಹಾರಾಷ್ಟ್ರದ ಪುಣೆ ನಗರದ ಟಿಂಬರ್ ಮಾರ್ಕೆಟ್‌ನಲ್ಲಿ ಬುಧವಾರ (ನ.18) ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮರದ ದಿಮ್ಮಿಗಳು ಹಾಗೂ ಮರದ ಉತ್ಪನ್ನಗಳ ವ್ಯಾಪಾರ ನಡೆಸುತ್ತಿದ್ದ 50ರಿಂದ 60ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಿಂದ ಮಾರುಕಟ್ಟೆಯ ಬಹುಭಾಗಕ್ಕೆ ವ್ಯಾಪಕ ಹಾನಿಯಾಗಿದೆ.
ಜೈ ವಲ್ಲಭ್ ಶಾಲೆಯ ಸಮೀಪವಿರುವ ಅಂಗಡಿಗಳಲ್ಲಿ ಮುಂಜಾನೆ ಸುಮಾರು 2.05ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿ, ಮಾರುಕಟ್ಟೆಯ ದೊಡ್ಡ ಪ್ರದೇಶವನ್ನು ಆವರಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪುಣೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು.
ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಪುಣೆ ಅಗ್ನಿಶಾಮಕ ದಳದ ಹಲವು ಘಟಕಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಪುಣೆ ಕಂಟೋನ್ಮೆಂಟ್‌ನ ಒಂದು ಘಟಕ ಹಾಗೂ ಪುಣೆ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (PMRDA) ಎರಡು ಘಟಕಗಳು ಸೇರಿದಂತೆ ಒಟ್ಟು 27 ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.
ಅಗ್ನಿಶಾಮಕ ಸಿಬ್ಬಂದಿ ವಿವಿಧ ದಿಕ್ಕುಗಳಿಂದ ನೀರನ್ನು ಹಾಯಿಸುವ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ತೀವ್ರ ಪ್ರಯತ್ನ ನಡೆಸಿದರು. ಮಾರುಕಟ್ಟೆಯ ಸಮೀಪದಲ್ಲೇ ವಸತಿ ಪ್ರದೇಶಗಳು ಹಾಗೂ ಮನೆಗಳಿರುವುದರಿಂದ ಬೆಂಕಿ ಅಲ್ಲಿಗೂ ವ್ಯಾಪಿಸದಂತೆ ವಿಶೇಷ ಮುನ್ನೆಚ್ಚರಿಕೆ ವಹಿಸಲಾಯಿತು.
ಸುಮಾರು ಎರಡು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಮರುಕಳಿಸಿ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಡೆಗಟ್ಟಲು ಹಾಗೂ ಪ್ರದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸದ್ಯ ಸ್ಥಳದಲ್ಲಿ ತಂಪುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಸುಮಾರು 10 ಹಿರಿಯ ಅಧಿಕಾರಿಗಳು ಹಾಗೂ 150ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಪಾಲ್ಗೊಂಡಿದ್ದರು. ಪುಣೆ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಗುರಾಮ್ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯ ಸಮನ್ವಯ ನಡೆಸಿದರು.
ಅಧಿಕಾರಿಗಳ ಪ್ರಕಾರ, ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತಂಪುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ.
ಘಟನೆಯಲ್ಲಿ ಈವರೆಗೆ ಯಾವುದೇ ಗಾಯಗಳು ಅಥವಾ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಂಗಡಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಉಂಟಾಗಿರುವ ಹಾನಿಯ ಪ್ರಮಾಣದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




