ಹೊಸದಿಲ್ಲಿ: ಪೆಟ್ರೋಲ್‌ನಲ್ಲಿ ಕಡ್ಡಾಯವಾಗಿ ಶೇ.20ರಷ್ಟು ಎಥೆನಾಲ್ (E20) ಮಿಶ್ರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕೆಲವು ವಲಯಗಳಿಂದ ಆತಂಕ ವ್ಯಕ್ತವಾಗುತ್ತಿರುವ ನಡುವೆಯೇ, ದೇಶದ ಪ್ರಮುಖ ವಾಹನ ತಯಾರಕ ಕಂಪೆನಿಗಳು E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್‌ಗೆ ಯಾವುದೇ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಸ್ಪಷ್ಟಪಡಿಸಿವೆ. ಆದರೆ, 2023ಕ್ಕೂ ಮೊದಲು ತಯಾರಾದ ವಾಹನಗಳಲ್ಲಿ ಮೈಲೇಜ್ ಶೇ.3ರಿಂದ 3.5ರವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ ಎಂಬುದನ್ನು ಒಪ್ಪಿಕೊಂಡಿವೆ.
ವಾಹನ ತಯಾರಕರ ಪ್ರಕಾರ, E20 ಪೆಟ್ರೋಲ್‌ನಲ್ಲಿ ಸಾಮಾನ್ಯ ಪೆಟ್ರೋಲ್‌ಗಿಂತ ಕ್ಯಾಲೊರಿಫಿಕ್ ಮೌಲ್ಯ (ಶಾಖ ಉತ್ಪಾದನಾ ಸಾಮರ್ಥ್ಯ) ಕಡಿಮೆ ಇರುವುದರಿಂದ ಇಂಧನ ದಕ್ಷತೆಯಲ್ಲಿ ಸ್ವಲ್ಪ ಇಳಿಕೆ ಕಂಡುಬರಬಹುದು.
E20 ಪೆಟ್ರೋಲ್ ಕುರಿತು ಗ್ರಾಹಕರಲ್ಲಿ ಮೂಡಿರುವ ಆತಂಕಗಳನ್ನು ನಿವಾರಿಸುವ ಉದ್ದೇಶದಿಂದ ಮಾರುತಿ ಸುಝುಕಿ ಇಂಡಿಯಾ, ಟೊಯೋಟಾ ಕಿರ್ಲೋಸ್ಕರ್, ಬಜಾಜ್ ಆಟೋ, ಟಿವಿಎಸ್ ಮೋಟರ್, ಹ್ಯುಂಡೈ ಮೋಟರ್ ಇಂಡಿಯಾ ಹಾಗೂ ಹೀರೋ ಮೋಟೋಕಾರ್ಪ್ ಕಂಪೆನಿಗಳ ಹಿರಿಯ ಅಧಿಕಾರಿಗಳು ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಮಾರುತಿ ಸುಝುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಭಾರ್ತಿ, “2025-26ನೇ ಸಾಲಿನಲ್ಲಿ ನಮ್ಮ ಕಂಪೆನಿ ಸುಮಾರು 2.8 ಕೋಟಿ ಕಾರುಗಳಿಗೆ ಸರ್ವಿಸ್ ಒದಗಿಸಿದೆ. ಅವುಗಳಲ್ಲಿ ಸುಮಾರು 1.5 ಕೋಟಿ ಕಾರುಗಳು ಮೂರು ವರ್ಷಕ್ಕಿಂತ ಹಳೆಯವು. ಅಂದರೆ, E20 ಪ್ರಮಾಣೀಕರಣ ಪಡೆಯದ ವಾಹನಗಳಾಗಿವೆ. ಆದರೂ ಈ ವಾಹನಗಳಲ್ಲಿ E20 ಇಂಧನ ಬಳಕೆಯಿಂದ ಯಾವುದೇ ಆತಂಕಕಾರಿ ಸಮಸ್ಯೆಗಳು ಕಂಡುಬಂದಿಲ್ಲ,” ಎಂದು ತಿಳಿಸಿದರು.
“ನಮ್ಮ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಗಳು ಮಾತ್ರವಲ್ಲ, ರಸ್ತೆ ಬಳಕೆಯ ಅನುಭವವೂ ಉತ್ತಮವಾಗಿದೆ. ಆದ್ದರಿಂದ E20 ಪೆಟ್ರೋಲ್ ಬಳಕೆಯಿಂದ ಗ್ರಾಹಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ನಾವು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇವೆ,” ಎಂದು ಅವರು ಹೇಳಿದರು.
ವಾಹನ ತಯಾರಕರು, E20 ಪೆಟ್ರೋಲ್ ಬಳಕೆಯಿಂದ ಎಂಜಿನ್‌ನ ಕಾರ್ಯಕ್ಷಮತೆ ಅಥವಾ ದೀರ್ಘಾವಧಿಯ ವಿಶ್ವಾಸಾರ್ಹತೆಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಪುನರುಚ್ಚರಿಸಿದ್ದು, ಹಳೆಯ ವಾಹನಗಳಲ್ಲಿ ಮಾತ್ರ ಇಂಧನ ದಕ್ಷತೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.




