ಭೋಪಾಲ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವೇಗದ ಪಿಕಪ್ ವಾಹನ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಕಾರ್ಮಿಕರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಗೋಹದ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-719ರಲ್ಲಿ ಛಿಮ್ಕಾ ಗ್ರಾಮದ ಸಮೀಪ ಮಧ್ಯರಾತ್ರಿ ವೇಳೆ ಈ ಅಪಘಾತ ಸಂಭವಿಸಿದೆ. ಗ್ವಾಲಿಯರ್ ಪ್ರದೇಶದಲ್ಲಿ ಭತ್ತ ನಾಟಿ ಕೆಲಸ ಮುಗಿಸಿಕೊಂಡು ಉತ್ತರ ಪ್ರದೇಶದಲ್ಲಿರುವ ತಮ್ಮ ಗ್ರಾಮಗಳಿಗೆ ಕಾರ್ಮಿಕರು ವಾಪಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ.
ಅಪಘಾತ ಸಂಭವಿಸಿದಾಗ ಪಿಕಪ್ ವಾಹನದಲ್ಲಿ ಒಟ್ಟು 29 ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಗೋಹದ್ ಚೌರಾಹಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮನರೇಶ್ ಯಾದವ್ ಅವರ ಪ್ರಕಾರ, ಪಿಕಪ್ ವಾಹನವು ಗಂಟೆಗೆ ಸುಮಾರು 80ರಿಂದ 90 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು.
“ಹೆದ್ದಾರಿಯಲ್ಲಿ ಕೆಲವು ಹಸುಗಳು ಕುಳಿತಿದ್ದವು. ಅವು ಏಕಾಏಕಿ ವಾಹನದ ಮುಂದೆ ಬಂದಾಗ ಚಾಲಕ ಅವುಗಳನ್ನು ತಪ್ಪಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಪಿಕಪ್ ವಾಹನದ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ,” ಎಂದು ಯಾದವ್ ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಹಲವು ಕಾರ್ಮಿಕರು ವಾಹನದೊಳಗೆ ಸಿಲುಕಿಕೊಂಡಿದ್ದರು. ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ವಾಹನದಿಂದ ಹೊರತೆಗೆದಿದ್ದಾರೆ.
ಐವರು ಮೃತದೇಹಗಳನ್ನು ಗೋಹದ್‌ನಲ್ಲಿ ಹಾಗೂ ಮೂವರ ಮೃತದೇಹಗಳನ್ನು ಗ್ವಾಲಿಯರ್‌ನಲ್ಲಿ ಇರಿಸಲಾಗಿದೆ. ಮೃತರ ಗುರುತು ಪತ್ತೆಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭತ್ತ ನಾಟಿ ಕೆಲಸಕ್ಕಾಗಿ ವಿವಿಧ ಗ್ರಾಮಗಳಿಂದ ಕಾರ್ಮಿಕರು ಗ್ವಾಲಿಯರ್ ಪ್ರದೇಶಕ್ಕೆ ಆಗಮಿಸಿದ್ದರು. ಕೆಲಸ ಪೂರ್ಣಗೊಂಡ ಬಳಿಕ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಗಳಿಗೆ ಅವರು ವಾಪಸಾಗುತ್ತಿದ್ದರು.
ರಾತ್ರಿ ವೇಳೆ ಪಿಕಪ್ ವಾಹನ ಅತಿವೇಗದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಜಾನುವಾರುಗಳ ಉಪಸ್ಥಿತಿಯೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಯಾದವ್ ತಿಳಿಸಿದ್ದಾರೆ.
ಅಪಘಾತಕ್ಕೀಡಾದ ವಾಹನಗಳನ್ನು ಹೆದ್ದಾರಿಯಿಂದ ತೆರವುಗೊಳಿಸಲಾಗಿದ್ದು, ಕೆಲಕಾಲ ಅಸ್ತವ್ಯಸ್ತಗೊಂಡಿದ್ದ ಸಂಚಾರವನ್ನು ಪುನಃ ಸುಗಮಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತರ ಗುರುತು ಸೇರಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.




