ತಿರುವನಂತಪುರಂ : ಕೇರಳದಲ್ಲಿ ತೀವ್ರಗೊಂಡಿರುವ ವಿದ್ಯುತ್ ಕೊರತೆ ಮತ್ತು ವಿದ್ಯುತ್ ಕಡಿತದ ನಡುವೆ, ಮುಖ್ಯಮಂತ್ರಿ ವಿ.ಡಿ. ಸತೀಶನ್ ನೇತೃತ್ವದ ಸರ್ಕಾರ ದೀರ್ಘಕಾಲೀನ ವಿದ್ಯುತ್ ಭದ್ರತೆಗಾಗಿ ಕೇಂದ್ರದ NTPC ಜೊತೆ ಹಲವು ಮಹತ್ವದ ಕ್ರಮಗಳಿಗೆ ಮುಂದಾಗಿದೆ. ನವದೆಹಲಿಯಲ್ಲಿ NTPC ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಹೆಚ್ಚುವರಿ ವಿದ್ಯುತ್ ಖರೀದಿ, ಬ್ಯಾಟರಿ ಸಂಗ್ರಹ ವ್ಯವಸ್ಥೆ, ಸೌರಶಕ್ತಿ ಯೋಜನೆಗಳು ಹಾಗೂ ಹೊಸ ವಿದ್ಯುತ್ ಸ್ಥಾವರದ ಕುರಿತು ಚರ್ಚೆ ನಡೆದಿದೆ.
ಸಭೆಯ ಪ್ರಮುಖ ನಿರ್ಧಾರವಾಗಿ ಆಲಪ್ಪುಳ ಜಿಲ್ಲೆಯ ಕಾಯಂಕುಳಂನಲ್ಲಿ 2,000 MWh ಸಾಮರ್ಥ್ಯದ Battery Energy Storage System (BESS) ಸ್ಥಾಪಿಸಲು ತೀರ್ಮಾನಿಸಲಾಗಿದೆ. KSEB, NTPC ಮತ್ತು NTPC Green Energy Limited (NGEL) ಈ ಯೋಜನೆಯನ್ನು ಜಂಟಿಯಾಗಿ ಜಾರಿಗೊಳಿಸಲಿದ್ದು, ಇದಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಲಿವೆ.
ಇದರ ಜೊತೆಗೆ ಪೊತ್ತನ್‌ಕೋಡ್ ಮತ್ತು ಶ್ರೀಕಂಠಪುರಂನಲ್ಲಿ ತಲಾ 80 MWh ಸಾಮರ್ಥ್ಯದ ಎರಡು BESS ಯೋಜನೆಗಳನ್ನು 2027ರ ಮಾರ್ಚ್ ವೇಳೆಗೆ ಕಾರ್ಯಾರಂಭಗೊಳಿಸುವ ಗುರಿ ಹೊಂದಲಾಗಿದೆ. ಒಟ್ಟಾರೆ ಇವುಗಳ ಸಾಮರ್ಥ್ಯ 160 MWh ಆಗಲಿದೆ.
ತಕ್ಷಣದ ವಿದ್ಯುತ್ ಅಗತ್ಯವನ್ನು ಪೂರೈಸಲು ಮಹಾರಾಷ್ಟ್ರದ ಸಿನ್ನರ್‌ನಲ್ಲಿರುವ NTPC ಯೋಜನೆಯಿಂದ ಕೇರಳಕ್ಕೆ 300 MW ವರೆಗೆ ವಿದ್ಯುತ್ ಪಡೆಯಲು ಒಪ್ಪಂದದ ಮಟ್ಟದಲ್ಲಿ ನಿರ್ಧಾರವಾಗಿದೆ. ಪ್ರತಿ ಯೂನಿಟ್‌ಗೆ ₹5.18 ದರದಲ್ಲಿ ವಿದ್ಯುತ್ ದೊರೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕಾಯಂಕುಳಂನಲ್ಲಿ NTPC ಕೈಗೆತ್ತಿಕೊಂಡಿರುವ 27 MW ಸೌರ ವಿದ್ಯುತ್ ಯೋಜನೆಯ ಕಾಮಗಾರಿಯನ್ನು ವೇಗಗೊಳಿಸಲು ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ದೀರ್ಘಕಾಲೀನ ಬೇಡಿಕೆ ಪೂರೈಸಲು ಕೇರಳಕ್ಕಾಗಿಯೇ ಪ್ರತ್ಯೇಕ ವಿದ್ಯುತ್ ಸ್ಥಾವರ ಸ್ಥಾಪಿಸುವಂತೆ NTPCಗೆ ಮನವಿ ಮಾಡಲಾಗಿದೆ.
ಅಲ್ಲದೆ, ರಾಮಗುಂಡಂ ವಿದ್ಯುತ್ ಸ್ಥಾವರದಿಂದ ಅಗತ್ಯ ವಿದ್ಯುತ್ ಪೂರೈಸಲು Power Purchase Agreement (PPA)ಗೆ ಸಹಿ ಹಾಕಲು NTPC ಸಿದ್ಧತೆ ವ್ಯಕ್ತಪಡಿಸಿದೆ.
KSEBಯ ನಿರ್ವಹಣೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸಲು NTPC ವೃತ್ತಿಪರ ಹಾಗೂ ತಾಂತ್ರಿಕ ಪರಿಣತಿ ಒದಗಿಸಲಿದೆ. ಆಧುನಿಕ ವಿದ್ಯುತ್ ನಿರ್ವಹಣಾ ವ್ಯವಸ್ಥೆಗಳ ಅಳವಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೆರವು ನೀಡಲಿದೆ.
ಕೇರಳದಲ್ಲಿ ವಿದ್ಯುತ್ ಬೇಡಿಕೆ ಮತ್ತು ಲಭ್ಯತೆಯ ನಡುವಿನ ಅಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಗಳು ಮಹತ್ವ ಪಡೆದಿವೆ. ವಿದ್ಯುತ್ ಕಡಿತದ ವಿಚಾರವಾಗಿ ವಿರೋಧ ಪಕ್ಷ ಸರ್ಕಾರದ ವಿರುದ್ಧ ಟೀಕೆ ನಡೆಸುತ್ತಿರುವ ಸಂದರ್ಭದಲ್ಲಿ, ಹೆಚ್ಚುವರಿ ವಿದ್ಯುತ್, ನವೀಕರಿಸಬಹುದಾದ ಇಂಧನ ಮತ್ತು ದೊಡ್ಡ ಪ್ರಮಾಣದ ವಿದ್ಯುತ್ ಸಂಗ್ರಹ ವ್ಯವಸ್ಥೆಗಳ ಮೂಲಕ ತಕ್ಷಣದ ಕೊರತೆಯ ಜೊತೆಗೆ ಭವಿಷ್ಯದ ಅಗತ್ಯವನ್ನೂ ಎದುರಿಸಲು ಸರ್ಕಾರ ಮುಂದಾಗಿದೆ.




