ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳ ಮೇಲಿನ ವ್ಯಾಪಾರ ಮಾರ್ಜಿನ್ಗೆ ಗರಿಷ್ಠ ಮಿತಿಯನ್ನು ವಿಧಿಸುವ ಪ್ರಸ್ತಾವನೆಯಿಂದ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಶೇ. 20ರಿಂದ 70ರವರೆಗೆ ಕಡಿಮೆಯಾಗಬಹುದು. ಇದರಿಂದ ರೋಗಿಗಳಿಗೆ ವರ್ಷಕ್ಕೆ ಸುಮಾರು ₹2,500 ಕೋಟಿ ಉಳಿತಾಯವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಔಷಧಗಳ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹಿನ್ನೆಲೆಯಲ್ಲಿ ಕೇಂದ್ರದ ಔಷಧೀಯ ಇಲಾಖೆಯು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮಾಹಿತಿ ನೀಡಿದೆ. ಕ್ಯಾನ್ಸರ್ ಔಷಧಗಳ ಮೇಲಿನ ವ್ಯಾಪಾರ ಮಾರ್ಜಿನ್ ಅನ್ನು ಅವುಗಳ ಎಂಆರ್ಪಿಯ ಶೇ. 30ಕ್ಕೆ ಸೀಮಿತಗೊಳಿಸಲು ಉದ್ದೇಶಿಸಲಾಗಿದೆ.
ಔಷಧಗಳ ಲಭ್ಯತೆ ಮತ್ತು ಕೈಗೆಟುಕುವ ದರದ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ಪರಿಶೀಲಿಸಿ, ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಔಷಧ ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸಮಂಜಸವಾದ ಲಾಭದ ಅವಕಾಶ ಉಳಿಸುವುದರ ಜೊತೆಗೆ, ಅತಿಯಾದ ವ್ಯಾಪಾರ ಮಾರ್ಜಿನ್ಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ.
ಯಾವೆಲ್ಲ ಕ್ಯಾನ್ಸರ್ ಔಷಧಗಳಿಗೆ ಈ ನಿಯಮ ಅನ್ವಯಿಸಬೇಕು ಎಂಬುದನ್ನು ಶಿಫಾರಸು ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಕ್ಟೋಬರ್ 9ರಂದು ತಜ್ಞರ ಸಮಿತಿಯನ್ನು ರಚಿಸಿದೆ. ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಸಮಿತಿಯ ಅಧ್ಯಕ್ಷರಾಗಿದ್ದು, 10ರಿಂದ 15 ದಿನಗಳೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ.
ಕ್ಯಾನ್ಸರ್ ಚಿಕಿತ್ಸೆಗೆ ಅನುಮೋದನೆ ಪಡೆದ ಔಷಧಗಳನ್ನು ಪ್ರಸ್ತಾವಿತ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಆದರೆ, ಕಡಿಮೆ ಬೆಲೆಯ ಔಷಧಗಳಿಗೆ ವಿನಾಯಿತಿ ನೀಡುವ ಸಾಧ್ಯತೆಯಿದೆ. ಮಾರುಕಟ್ಟೆಯ ಬೆಳವಣಿಗೆ ಹಾಗೂ ಸಾರ್ವಜನಿಕ ಆರೋಗ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಬಹುದು ಎಂದು ಕೇಂದ್ರ ತಿಳಿಸಿದೆ.
ಸಮಿತಿಯ ಶಿಫಾರಸುಗಳನ್ನು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಪರಿಶೀಲಿಸಿ ಸೂಕ್ತ ನಿರ್ದೇಶನಗಳನ್ನು ನೀಡಲಿದೆ. ನಂತರ ಬೆಲೆ ಅಧಿಸೂಚನೆ ಹೊರಡಿಸಿ, ದರ ಇಳಿಕೆಯ ಲಾಭವನ್ನು ರೋಗಿಗಳಿಗೆ ತಲುಪಿಸುವಂತೆ ಔಷಧ ತಯಾರಕರಿಗೆ ಸೂಚನೆ ನೀಡಲಾಗುತ್ತದೆ.
2019ರಲ್ಲಿ ಎನ್ಪಿಪಿಎ 42 ಆಯ್ದ ಕ್ಯಾನ್ಸರ್ ಔಷಧಗಳ ಮೇಲೆ ಶೇ. 30ರ ವ್ಯಾಪಾರ ಮಾರ್ಜಿನ್ ಮಿತಿಯನ್ನು ಜಾರಿಗೆ ತಂದಿತ್ತು. ಇದರಿಂದ 526 ಬ್ರ್ಯಾಂಡ್ಗಳ ಎಂಆರ್ಪಿ ಕಡಿಮೆಯಾಗಿದ್ದು, ಕಂಪನಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ರೋಗಿಗಳಿಗೆ ವರ್ಷಕ್ಕೆ ಸುಮಾರು ₹984 ಕೋಟಿ ಉಳಿತಾಯವಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ.
ಈ ಹಿಂದಿನ ಕ್ರಮವು ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ಔಷಧಗಳಿಗೆ ಬೆಲೆ ನಿಯಂತ್ರಣ ವಿಸ್ತರಿಸಲು ನೀತಿ ಆಧಾರ ಒದಗಿಸಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ವ್ಯಾಪಾರ ಮಾರ್ಜಿನ್ ಕಡಿತಗೊಳಿಸುವಾಗ ಸಣ್ಣ ಮತ್ತು ಮಧ್ಯಮ ಗಾತ್ರದ ಔಷಧ ತಯಾರಕರು, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳ ಮೇಲಿನ ಪರಿಣಾಮವನ್ನೂ ಪರಿಗಣಿಸಬೇಕಿದೆ ಎಂದು ಕೇಂದ್ರ ಎಚ್ಚರಿಸಿದೆ. ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಔಷಧ ವಿತರಣೆಗೆ ಸ್ಥಳೀಯ ವ್ಯಾಪಾರಿಗಳು ಮತ್ತು ಹಲವು ಹಂತಗಳ ವಿತರಣಾ ವ್ಯವಸ್ಥೆ ಅವಲಂಬನೆಯಾಗಿರುವುದರಿಂದ ಉದ್ಯೋಗ ಹಾಗೂ ಔಷಧ ಪೂರೈಕೆಗೆ ಧಕ್ಕೆಯಾಗುವ ಆತಂಕವನ್ನು ಕೆಲವು ಉದ್ಯಮ ಸಂಘಟನೆಗಳು ವ್ಯಕ್ತಪಡಿಸಿವೆ.
ಕಡಿಮೆ ಬೆಲೆಯ ಔಷಧಗಳು, ವಿಶೇಷ ಸಂಗ್ರಹಣೆ ಅಥವಾ ನಿರ್ವಹಣೆ ಅಗತ್ಯವಿರುವ ಔಷಧಗಳು ಹಾಗೂ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗುವ ಉತ್ಪನ್ನಗಳಿಗೆ ಹೆಚ್ಚಿನ ಮಾರ್ಜಿನ್ ಕೆಲವೊಮ್ಮೆ ಅಗತ್ಯವಾಗಬಹುದು ಎಂದು ಸರ್ಕಾರ ತಿಳಿಸಿದೆ. ಇಲ್ಲದಿದ್ದರೆ ಇಂತಹ ಔಷಧಗಳನ್ನು ಮಾರಾಟಕ್ಕೆ ಇಟ್ಟುಕೊಳ್ಳುವುದು ವ್ಯಾಪಾರಿಗಳಿಗೆ ಲಾಭದಾಯಕವಾಗದಿರಬಹುದು ಎಂಬುದು ಅದರ ವಾದ.
ಔಷಧ ಬೆಲೆ ನಿಯಂತ್ರಣ ಆದೇಶ-2013ರ ಅಡಿಯಲ್ಲಿ ಮಧುಮೇಹ ಮತ್ತು ಹೃದಯ ಸಂಬಂಧಿ ಔಷಧಗಳು, ಹೃದಯದ ಸ್ಟೆಂಟ್ಗಳು, ಮೊಣಕಾಲಿನ ಇಂಪ್ಲಾಂಟ್ಗಳು ಹಾಗೂ ಕೋವಿಡ್ ಅವಧಿಯಲ್ಲಿ ಆಮ್ಲಜನಕ ಕಾನ್ಸನ್ಟ್ರೇಟರ್ಗಳು ಸೇರಿದಂತೆ ಹಲವು ವೈದ್ಯಕೀಯ ಉತ್ಪನ್ನಗಳ ಬೆಲೆ ಮತ್ತು ಮಾರ್ಜಿನ್ ನಿಯಂತ್ರಿಸಲು ಕೈಗೊಂಡ ಕ್ರಮಗಳನ್ನೂ ಕೇಂದ್ರ ಉಲ್ಲೇಖಿಸಿದೆ.
ಇದರ ಜೊತೆಗೆ, ಸುಮಾರು 19,000 ಜನೌಷಧಿ ಕೇಂದ್ರಗಳ ಮೂಲಕ ಜೆನೆರಿಕ್ ಔಷಧಗಳನ್ನು ಒದಗಿಸುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹಾಗೂ ಅಗತ್ಯ ಮತ್ತು ಜೀವ ರಕ್ಷಕ ಔಷಧಗಳನ್ನು ರಿಯಾಯಿತಿ ದರದಲ್ಲಿ ನೀಡುವ ಅಮೃತ್ ಔಷಧ ಮಳಿಗೆಗಳನ್ನೂ ಸರ್ಕಾರ ಪ್ರಸ್ತಾಪಿಸಿದೆ.
ಔಷಧಗಳು ಜನರಿಗೆ ಕೈಗೆಟುಕುವ ದರದಲ್ಲಿ ದೊರೆಯುವುದರ ಜೊತೆಗೆ ಅವುಗಳ ಲಭ್ಯತೆಯೂ ಖಚಿತವಾಗಬೇಕು. ಈ ಎರಡರ ನಡುವೆ ಸಮತೋಲನ ಕಾಯ್ದುಕೊಂಡು, ವ್ಯಾಪಾರ ಮಾರ್ಜಿನ್ ನಿಯಂತ್ರಣಕ್ಕೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.




