ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊಡಿಸಿದ್ದು, ಇತ್ತೀಚೆಗೆ ನಡೆಸ ಮರು ಮತ ಎಣಿಕೆಯನ್ನು ರದ್ದು ಮಾಡಿದೆ. ಈ ಮೂಲಕ ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಶಾಸಕರಾಗಿ ಮುಂದುವರೆಯಲಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಸಂಬಂಧಿಸಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಾಜಿ ಶಾಸಕ ಟಿಡಿ ರಾಜೇಗೌಡ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸೋಮವಾರ ಸುಪ್ರೀಂಕೋರ್ಟ್ ನಡೆಸಿತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಈ ಅರ್ಜಿಯನ್ನು ಈ ತುರ್ತು ವಿಚಾರಣೆ ಮಾಡಿದೆ.
ಶೃಂಗೇರಿ ಕ್ಷೇತ್ರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಟಿ.ಡಿ. ರಾಜೇಗೌಡ ಅವರು ಶಾಸಕರಾಗಿ ಮತ್ತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಇತ್ತೀಚೆಗೆ ಬಿಜೆಪಿಯ ಡಿ.ಎನ್. ಜೀವರಾಜ್ ಅವರಿಗೆ ಅನುಕೂಲಕರವಾಗಿದ್ದ ಮರುಎಣಿಕೆಯನ್ನು ರದ್ದುಗೊಳಿಸಲಾಗಿದೆ.
ಏನಿದು ಪ್ರಕರಣ?
2023ರ ಚುನಾವಣೆಯಲ್ಲಿ ರಾಜೇಗೌಡ ಅವರು ಡಿ.ಎನ್.ಜೀವರಾಜ್ ಅವರ ವಿರುದ್ಧ 201 ಮತಗಳ ಅಂತರದಿಂದ ಜಯ ಗಳಿಸಿದ್ದರು. ಆದರೆ, ಜೀವರಾಜ್ ಅವರು ಚುನಾವಣಾ ಅಕ್ರಮಗಳ ಆರೋಪ ಹೊರಿಸಿ ಅಂಚೆ ಮತಗಳ ಮರು ಎಣಿಕೆಗೆ ಕೋರಿ ಹೈಕೋರ್ಟ್ನಲ್ಲಿಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್, ಅಂಚೆ ಮತಗಳನ್ನು ಮರು ಎಣಿಕೆ ಮಾಡುವಂತೆ ಸೂಚಿಸಿತ್ತು.
ಅದರಂತೆ ಮೇ 2ರಂದು ಅಂಚೆ ಮತಗಳ ಮರು ಎಣಿಕೆ ನಡೆದಿದ್ದು ರಾಜೇಗೌಡ ಅವರು ಪರಾಭವಗೊಂಡಿದ್ದರು. ಜೀವರಾಜ್ ಅವರನ್ನು ಶಾಸಕರಾಗಿ ಚುನಾವಣಾ ಆಯೋಗ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.




