ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕೀಯ ಮರುಕಳಿಸಿದೆ. ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ, ತಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ರೆಸಾರ್ಟ್‌ಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.
ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾದ BMCಯ ನಿಯಂತ್ರಣ ಕೈಗೆತ್ತಿಕೊಳ್ಳುವ ಮುನ್ನ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಹಾಗೂ ಮೇಯರ್ ಸ್ಥಾನಕ್ಕಾಗಿ ನಡೆಯಬಹುದಾದ ರಾಜಕೀಯ ಚೌಕಾಶಿ—ಈ ಎರಡು ಪ್ರಮುಖ ಆಯಾಮಗಳಲ್ಲಿ ಈ ಬೆಳವಣಿಗೆಯನ್ನು ರಾಜಕೀಯ ವಲಯಗಳು ಗಮನಿಸುತ್ತಿವೆ.
25 ವರ್ಷಗಳ ನಂತರ ಠಾಕ್ರೆ ಕುಟುಂಬದಿಂದ ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ ಬಿಜೆಪಿ–ಶಿವಸೇನೆ (ಶಿಂಧೆ) ಮೈತ್ರಿಕೂಟ ಇತ್ತೀಚಿನ BMC ಚುನಾವಣೆಯಲ್ಲಿ ಬಹುಮತ ಪಡೆದಿದೆ. ಆದರೆ ಯಾವುದೇ ಪಕ್ಷವೂ ಸ್ವತಂತ್ರ ಬಹುಮತ ಹೊಂದಿಲ್ಲ. ಇದೇ ಕಾರಣಕ್ಕೆ ವಿರೋಧ ಪಕ್ಷಗಳಿಂದ ಕುದುರೆ ವ್ಯಾಪಾರದ ಭೀತಿ ಎದುರಾಗಬಹುದು ಎಂಬ ಆತಂಕದಲ್ಲಿ ಶಿಂಧೆ ಪಾಳಯ ತಮ್ಮ ಕಾರ್ಪೊರೇಟರ್‌ಗಳನ್ನು ರೆಸಾರ್ಟ್‌ಗಳಿಗೆ ಸ್ಥಳಾಂತರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. BMC ನಿಯಂತ್ರಣಕ್ಕೆ ಅಗತ್ಯವಿರುವ ಅರ್ಧದಷ್ಟು ಸದಸ್ಯರ ಗಡಿ ದಾಟಲು ಶಿಂಧೆ ಅವರ ಪಕ್ಷಕ್ಕೆ ಕೇವಲ ಎಂಟು ಕಾರ್ಪೊರೇಟರ್‌ಗಳ ಅಗತ್ಯವಿದೆ ಎನ್ನಲಾಗಿದೆ.
ಮೇಯರ್ ಹುದ್ದೆ ಮೇಲೆ ಕಣ್ಣು
ಪಕ್ಷದೊಳಗೆ ಮೇಯರ್ ಸ್ಥಾನದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬ ಒತ್ತಡವೂ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಚೌಕಾಶಿ ನಡೆಸಲು ಶಿಂಧೆ ಪಾಳಯ ಈ ತಂತ್ರವನ್ನು ಅನುಸರಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 227 ವಾರ್ಡ್‌ಗಳಿರುವ BMCಯಲ್ಲಿ ಬಹುಮತಕ್ಕೆ 114 ಸ್ಥಾನಗಳ ಅಗತ್ಯವಿದೆ. ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದಿದ್ದರೆ, ಶಿಂಧೆ ಅವರ ಶಿವಸೇನೆ 29 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಒಟ್ಟಾರೆ ಮೈತ್ರಿಕೂಟದ ಸಂಖ್ಯೆ 118 ಆಗಿದ್ದು, ಇದು ಬಹುಮತಕ್ಕಿಂತ ನಾಲ್ಕು ಸ್ಥಾನ ಹೆಚ್ಚು.
ಇದೇ ವೇಳೆ, ಮಹಾಯುತಿ ಭಾಗವಾಗಿದ್ದರೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಏಕಾಂಗಿಯಾಗಿ ಸ್ಪರ್ಧಿಸಿ ಮೂರು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.
ಕುದುರೆ ವ್ಯಾಪಾರದ ಭೀತಿ
ಪ್ರತಿಪಕ್ಷಗಳಾದ ಶಿವಸೇನೆ (ಯುಬಿಟಿ) 65, ಕಾಂಗ್ರೆಸ್ 24, ಎಐಎಂಐಎಂ 8, ಎಂಎನ್‌ಎಸ್ 6, ಸಮಾಜವಾದಿ ಪಕ್ಷ 2 ಹಾಗೂ ಶಿವಸೇನೆ (SP) 1 ಸ್ಥಾನಗಳಲ್ಲಿ ಜಯ ಗಳಿಸಿವೆ. ಈ ಹಿನ್ನಲೆಯಲ್ಲಿ ಪಕ್ಷಾಂತರ ಮತ್ತು ಕುದುರೆ ವ್ಯಾಪಾರದ ಭೀತಿ ಹೆಚ್ಚಾಗಿದೆ. ಮಹಾಯುತಿ ಪಾಳಯದಿಂದ ಕೇವಲ ಎಂಟು ಕಾರ್ಪೊರೇಟರ್‌ಗಳನ್ನು ತಮ್ಮ ಕಡೆಗೆ ಸೆಳೆಯಲು ಪ್ರತಿಪಕ್ಷಗಳು ಯಶಸ್ವಿಯಾದರೆ, ಠಾಕ್ರೆ ಪಾಳಯ ಹಾಗೂ ಮಿತ್ರರು ಸೇರಿ BMCಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬಹುದು.
ಚೌಕಾಶಿಯ ತಂತ್ರವೇ?
ಶಿಂಧೆ ಅವರ ಈ ನಡೆಯನ್ನು ಬಿಜೆಪಿಯೊಂದಿಗೆ ರಾಜಕೀಯ ಚೌಕಾಶಿ ನಡೆಸುವ ತಂತ್ರವೆಂದು ಕೂಡಾ ವಿಶ್ಲೇಷಿಸಲಾಗುತ್ತಿದೆ. ಕಿಂಗ್‌ಮೇಕರ್ ಸ್ಥಾನದಲ್ಲಿರುವ ಶಿಂಧೆ ಪಾಳಯ, BMC ಮೇಯರ್ ಹುದ್ದೆಯನ್ನು ಶಿವಸೇನೆ ಕಾರ್ಪೊರೇಟರ್‌ಗೆ ಪಡೆಯಬೇಕು ಎಂಬ ಬಯಕೆಯನ್ನು ಹೊಂದಿದೆ ಎಂದು ಮೂಲಗಳು ಹೇಳುತ್ತಿವೆ. ಮುಂಬೈ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಚಲನವಲನಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.




