ಹೊಸದಿಲ್ಲಿ : ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಮತ್ತೊಮ್ಮೆ ಹೆಚ್ಚಿಸಲಾಗಿದ್ದು, ಪೆಟ್ರೋಲ್ ಲೀಟರ್ ಗೆ 0.86 ರೂ. ಹಾಗೂ ಡೀಸೆಲ್ ಲೀಟರ್ ಗೆ 0.83 ರೂ. ಏರಿಕೆಯಾಗಿದೆ. ಈಗಾಗಲೇ ಹೆಚ್ಚುತ್ತಿರುವ ಸಾರಿಗೆ ಮತ್ತು ಗೃಹೋಪಯೋಗಿ ವೆಚ್ಚಗಳಿಂದ ತತ್ತರಿಸಿರುವ ಜನರಿಗೆ ಇದರಿಂದ ಮತ್ತಷ್ಟು ಹೊರೆ ಬೀಳಲಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಕೆಲವೇ ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಲೀಟರ್‌ಗೆ ಸುಮಾರು 3 ರೂ.ಯಷ್ಟು ಹೆಚ್ಚಿಸಿದ್ದವು. ಸುಮಾರು ನಾಲ್ಕು ವರ್ಷಗಳ ಬಳಿಕ ನಡೆದ ಮೊದಲ ಪ್ರಮುಖ ದರ ಏರಿಕೆಯ ಬೆನ್ನಲ್ಲೇ ಇದೀಗ ಮತ್ತೊಮ್ಮೆ ದರ ಪರಿಷ್ಕರಣೆ ಮಾಡಲಾಗಿದೆ.
ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ಅಂತರರಾಷ್ಟ್ರೀಯ ಇಂಧನ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ದರ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಲಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಝ್ ಜಲಸಂಧಿಯ ಸುತ್ತಮುತ್ತಲಿನ ಅನಿಶ್ಚಿತ ಪರಿಸ್ಥಿತಿ ಇಂಧನ ದರಗಳ ಏರಿಕೆಗೆ ಕಾರಣ ಎನ್ನಲಾಗಿದೆ.
ಇಂಧನ ದರ ಏರಿಕೆಯಿಂದ ಪ್ರಯಾಣಿಕರು, ಸಾರಿಗೆ ಸಂಸ್ಥೆಗಳು ಹಾಗೂ ವಿವಿಧ ವಲಯಗಳ ವ್ಯಾಪಾರ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಿರಂತರ ಏರಿಕೆಯಿಂದ ಸಾರಿಗೆ ಹಾಗೂ ಲಾಜಿಸ್ಟಿಕ್ಸ್ ವೆಚ್ಚಗಳು ಹೆಚ್ಚಲಿದ್ದು, ಅಗತ್ಯ ವಸ್ತುಗಳು ಮತ್ತು ಆಹಾರ ಪದಾರ್ಥಗಳ ಬೆಲೆಗಳ ಮೇಲೂ ಪರಿಣಾಮ ಕಾಣಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇಂಧನ ದರ ಏರಿಕೆ ಮುಂದುವರಿದರೆ ಸಾರ್ವಜನಿಕ ಸಾರಿಗೆ ದರಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ, ಹಿಂದಿನ 3 ರೂ. ಏರಿಕೆಯ ಬಳಿಕ ಪೆಟ್ರೋಲ್ ದರ ಲೀಟರ್‌ಗೆ 97.77 ರೂ. ಹಾಗೂ ಡೀಸೆಲ್ 90.67 ರೂ.ಕ್ಕೆ ತಲುಪಿತ್ತು. ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ಹಲವಾರು ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂ. ದಾಟಿದೆ.




