ಸಿಂಗಾಪುರ್: ಸಿಂಗಾಪುರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿಂಗಾಪುರ್ ಓಪನ್ 2026 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಡಬಲ್ಸ್ ವಿಭಾಗದ ತಾರೆಯರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಹಾಗೂ ಮಿಶ್ರ ಡಬಲ್ಸ್ ವಿಭಾಗದ ಧ್ರುವ್ ಕಪಿಲಾ-ತನಿಷಾ ಕ್ರಾಸ್ಟೊ ಜೋಡಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿವೆ.
ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಜೋಡಿ ಮಲೇಷ್ಯಾದ ಕಾಂಗ್ ಖೈ ಕ್ಸಿಂಗ್ ಮತ್ತು ಆರೋನ್ ತೈ ವಿರುದ್ಧ ಹಿನ್ನಡೆಯಿಂದ ಚೇತರಿಸಿಕೊಂಡು 19-21, 21-17, 21-13 ಅಂತರದಲ್ಲಿ ಜಯ ಸಾಧಿಸಿತು. 65 ನಿಮಿಷಗಳ ಕಾಲ ನಡೆದ ಈ ರೋಚಕ ಪಂದ್ಯದಲ್ಲಿ ಮೊದಲ ಗೇಮ್ ಕಳೆದುಕೊಂಡಿದ್ದ ಭಾರತೀಯ ಜೋಡಿ ಬಳಿಕ ಅದ್ಭುತ ಆಟದ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಕೊರಿಯಾದ ವಿಶ್ವ ನಂ.1 ಹಾಗೂ ಹಾಲಿ ವಿಶ್ವ ಚಾಂಪಿಯನ್‌ಗಳಾದ ಕಿಮ್ ವೊನ್ ಹೋ ಮತ್ತು ಸಿಯೋ ಸಿಯುಂಗ್ ಜೆ ಅವರನ್ನು ಎದುರಿಸಲಿದೆ.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಧ್ರುವ್ ಕಪಿಲಾ ಮತ್ತು ತನಿಷಾ ಕ್ರಾಸ್ಟೊ ಜೋಡಿ ಸೆಮಿಫೈನಲ್‌ಗೆ ಪ್ರವೇಶಿಸಿತು. ಕ್ವಾರ್ಟರ್‌ಫೈನಲ್ ವೇಳೆ ಮಲೇಷ್ಯಾದ ಮೂರನೇ ಶ್ರೇಯಾಂಕಿತ ಜೋಡಿಯಾದ ಚೆನ್ ಟಾಂಗ್ ಜೀ ಮತ್ತು ಟೋ ಇ ವೆಯ್ ಮೊದಲ ಗೇಮ್‌ನಲ್ಲೇ ಗಾಯದ ಕಾರಣ ಪಂದ್ಯದಿಂದ ನಿವೃತ್ತರಾದರು. ಇದೀಗ ಧ್ರುವ್-ತನಿಷಾ ಜೋಡಿ ಫೈನಲ್ ಪ್ರವೇಶಕ್ಕಾಗಿ ಜಪಾನ್‌ನ ಯುಯಿಚಿ ಶಿಮೊಗಾಮಿ ಮತ್ತು ಸಯಾಕಾ ಹೋಬರಾ ಜೋಡಿಯನ್ನು ಎದುರಿಸಲಿದೆ.
ಇನ್ನೊಂದೆಡೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಲಕ್ಷ್ಯ ಸೇನ್ ಹೋರಾಟದ ಪ್ರದರ್ಶನ ನೀಡಿದರೂ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಕೋಕಿ ವಟನಬೆ ವಿರುದ್ಧ 19-21, 21-15, 15-21 ಅಂತರದಲ್ಲಿ ಸೋಲು ಕಂಡರು. 68 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಲಕ್ಷ್ಯ ಉತ್ತಮ ಪೈಪೋಟಿ ನೀಡಿದರೂ ಕೊನೆಗೆ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಅವರ ಅಭಿಯಾನವೂ ಕ್ವಾರ್ಟರ್‌ಫೈನಲ್‌ನಲ್ಲೇ ಅಂತ್ಯಗೊಂಡಿತು. ವಿಶ್ವ ನಂ.1 ಆಟಗಾರ್ತಿ ಆನ್ ಸೆ ಯಂಗ್ ವಿರುದ್ಧ ಸಿಂಧು 17-21, 14-21 ಅಂತರದಲ್ಲಿ ಸೋತರು. 48 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಕೊರಿಯಾದ ಆಟಗಾರ್ತಿ ಸಂಪೂರ್ಣ ಮೇಲುಗೈ ಸಾಧಿಸಿದರು. ಇದರೊಂದಿಗೆ ಸಿಂಧು ವಿರುದ್ಧದ ಮುಖಾಮುಖಿ ದಾಖಲೆಯಲ್ಲಿ ಆನ್ ಸೆ ಯಂಗ್ 9-0 ಮುನ್ನಡೆ ಕಾಯ್ದುಕೊಂಡಿದ್ದಾರೆ.
ಟೂರ್ನಿಯ ಆರಂಭಿಕ ಸುತ್ತುಗಳಲ್ಲಿ ಸಿಂಧು ಜಪಾನ್‌ನ ರಿಕೊ ಗುಂಜಿ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದರು. ಸಾತ್ವಿಕ್-ಚಿರಾಗ್ ಜೋಡಿ ಚೈನೀಸ್ ತೈಪೆಯ ಲೀ ಜೆ-ಹುಯಿ ಮತ್ತು ಯಾಂಗ್ ಪೋ-ಹ್ಸುವಾನ್ ವಿರುದ್ಧ ಜಯ ಸಾಧಿಸಿದ್ದರೆ, ಧ್ರುವ್-ತನಿಷಾ ಜೋಡಿ ಜಪಾನ್‌ನ ಯುಟಾ ವಟನಬೆ ಮತ್ತು ಮಾಯಾ ಟಗುಚಿ ವಿರುದ್ಧ ಭರ್ಜರಿ ಪುನರಾಗಮನದೊಂದಿಗೆ ಗೆಲುವು ದಾಖಲಿಸಿತ್ತು.
ಭಾರತದ ಪರ ಈಗ ಸಿಂಗಾಪುರ್ ಓಪನ್‌ನಲ್ಲಿ ಸಾತ್ವಿಕ್-ಚಿರಾಗ್ ಹಾಗೂ ಧ್ರುವ್-ತನಿಷಾ ಜೋಡಿಗಳ ಮೇಲೆ ಪ್ರಶಸ್ತಿ ನಿರೀಕ್ಷೆ ನೆಟ್ಟಿದೆ.




