ಪುಣೆ: ‘ಆಪರೇಷನ್ ಸಿಂಧೂರ್’ ಇನ್ನೂ ಮುಂದುವರಿದಿದ್ದು, ಪರಿಸ್ಥಿತಿ ಅಗತ್ಯವಿದ್ದರೆ ‘ಆಪರೇಷನ್ ಸಿಂಧೂರ್ 2.0’ ಕೈಗೊಳ್ಳಲು ಭಾರತೀಯ ಸಶಸ್ತ್ರ ಪಡೆಗಳ ತ್ರಿವಿಧ ಸೇವೆಗಳು ಸಂಪೂರ್ಣ ಸಿದ್ಧತೆ ನಡೆಸುತ್ತಿವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA)ಯ 150ನೇ ಕೋರ್ಸ್‌ನ ಪಾಸಿಂಗ್ ಔಟ್ ಪರೇಡ್ (POP) ಬಳಿಕ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಯುದ್ಧ ವಿರಾಮ ಜಾರಿಯಲ್ಲಿದ್ದರೂ ಸಶಸ್ತ್ರ ಪಡೆಗಳು ಸಂಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
“ಆಪರೇಷನ್ ಸಿಂಧೂರ್ ಇನ್ನೂ ಮುಂದುವರಿಯುತ್ತಿದೆ. ಸದ್ಯ ತಾತ್ಕಾಲಿಕವಾಗಿ ಶತ್ರುತ್ವ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದ್ದರಿಂದ ಭಾರತೀಯ ಸೇನೆ ಸೇರಿದಂತೆ ತ್ರಿವಿಧ ಪಡೆಗಳು ‘ಆಪರೇಷನ್ ಸಿಂಧೂರ್ 2.0’ ಅಗತ್ಯವಿದ್ದರೆ ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡಿವೆ. ಪ್ರಸ್ತುತ ನಾವು ಮೂರು ಪಡೆಗಳ ನಡುವಿನ ಸಮನ್ವಯತೆಯನ್ನು ಹೆಚ್ಚಿಸುವುದರ ಜೊತೆಗೆ ಮುಂದಿನ ತಲೆಮಾರಿನ ಯುದ್ಧಗಳಿಗೆ ಸಜ್ಜಾಗುತ್ತಿದ್ದೇವೆ,” ಎಂದು ಹೇಳಿದರು.
ಭವಿಷ್ಯದ ಯುದ್ಧಗಳು ಕೇವಲ ಭೂಮಿ, ಸಮುದ್ರ ಮತ್ತು ವಾಯು ಕ್ಷೇತ್ರಗಳಿಗೆ ಸೀಮಿತವಾಗಿರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
“ಮುಂದಿನ ಯುದ್ಧಗಳಲ್ಲಿ ಬಾಹ್ಯಾಕಾಶ (Space), ಸೈಬರ್ (Cyber) ಮತ್ತು ಕಾಗ್ನಿಟಿವ್ ವಾರ್ಫೇರ್ (Cognitive Warfare) ಪ್ರಮುಖ ಪಾತ್ರ ವಹಿಸಲಿವೆ. ಯುದ್ಧದ ಸ್ವರೂಪ ವೇಗವಾಗಿ ಬದಲಾಗುತ್ತಿದೆ,” ಎಂದು ಜನರಲ್ ದ್ವಿವೇದಿ ತಿಳಿಸಿದರು.
ತಂತ್ರಜ್ಞಾನ ಅಭಿವೃದ್ಧಿಯಿಂದ ಯುದ್ಧಭೂಮಿಯು ಸಂಪೂರ್ಣ ಪಾರದರ್ಶಕವಾಗಿದ್ದು, ಎದುರಾಳಿ ಪಡೆಗಳು ಚಲನವಲನಗಳನ್ನು ನೈಜ ಸಮಯದಲ್ಲೇ ಗಮನಿಸಬಲ್ಲ ಸ್ಥಿತಿಗೆ ಬಂದಿದೆ ಎಂದು ಅವರು ಹೇಳಿದರು.
“ಇಂದಿನ ಯುದ್ಧಭೂಮಿ 24 ಗಂಟೆಗಳ ಕಾಲ ಸಕ್ರಿಯವಾಗಿದೆ. ಪ್ರತಿಯೊಂದು ಚಲನೆಯೂ ಎದುರಾಳಿಗೆ ಗೋಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಯೋಧರು ಹಾಗೂ ಗಡಿಭಾಗದ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಪಡೆಗಳ ನಿಯೋಜನೆ ಮತ್ತು ಕಾರ್ಯಾಚರಣೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ,” ಎಂದು ಹೇಳಿದರು.
ಮಾಹಿತಿ ಯುದ್ಧದ (Information Warfare) ಮಹತ್ವವನ್ನು ಒತ್ತಿ ಹೇಳಿದ ಅವರು, ರಾಷ್ಟ್ರೀಯ ಏಕತೆ ಮತ್ತು ಸಾರ್ವಜನಿಕರ ವಿಶ್ವಾಸವೇ ಯುದ್ಧದ ಯಶಸ್ಸಿಗೆ ಪ್ರಮುಖ ಅಂಶಗಳಾಗಿವೆ ಎಂದರು.
“ವಿಜಯವು ನೆಲದ ಮೇಲೆ ಅಲ್ಲ, ಮನಸ್ಸಿನಲ್ಲಿ ನಿರ್ಧಾರವಾಗುತ್ತದೆ. ಮಾಹಿತಿ ಯುದ್ಧ ಯಶಸ್ವಿಯಾಗಬೇಕಾದರೆ ದೇಶದ ಜನರು ಮಾಹಿತಿ ನೀಡುವ ಸಂಸ್ಥೆಗಳ ಮೇಲೆ ನಂಬಿಕೆ ಇಡಬೇಕು. ಜನರು ಪರಸ್ಪರ ಹಾಗೂ ದೇಶದ ಎಲ್ಲಾ ಪಾಲುದಾರರ ಮೇಲೆ ವಿಶ್ವಾಸವಿಟ್ಟರೆ ಅಂತಹ ರಾಷ್ಟ್ರ ಯುದ್ಧದಲ್ಲಿ ಸದಾ ಗೆಲುವು ಸಾಧಿಸುತ್ತದೆ,” ಎಂದು ಹೇಳಿದರು.
‘ಆಪರೇಷನ್ ಸಿಂಧೂರ್’ ಭಾರತದ ದೃಢ ಸಂಕಲ್ಪ ಹಾಗೂ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ ಎಂದು ಅವರು ಹೇಳಿದರು.
“ಆಪರೇಷನ್ ಸಿಂಧೂರ್ ಭಾರತದ ಸಂಕಲ್ಪವನ್ನು ಹಾಗೂ ನಿಖರ, ಸಮತೋಲಿತ ಮತ್ತು ಉದ್ದೇಶಪೂರಿತ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ಕಾರ್ಯಾಚರಣೆಯು ಸಮಗ್ರ ಯೋಜನೆ, ತಕ್ಷಣದ ಗುಪ್ತಚರ ಮಾಹಿತಿ, ನಿಖರ ಗುರಿ ಸಾಧನೆ, ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆ, ಸುರಕ್ಷಿತ ಸಂವಹನ ಮತ್ತು ವಿವಿಧ ಕ್ಷೇತ್ರಗಳ ನಡುವಿನ ಸಮನ್ವಯದ ಮಹತ್ವವನ್ನು ಎತ್ತಿ ತೋರಿಸಿತು,” ಎಂದು ಹೇಳಿದರು.
ಭಾರತೀಯ ಸೇನೆ ಈಗಾಗಲೇ ಯುದ್ಧದ ಬದಲಾಗುತ್ತಿರುವ ಸ್ವರೂಪಕ್ಕೆ ಹೊಂದಿಕೊಳ್ಳಲು ವ್ಯಾಪಕ ಬದಲಾವಣೆಗಳನ್ನು ಕೈಗೊಂಡಿದ್ದು, “ಭವಿಷ್ಯಕ್ಕೆ ಸಿದ್ಧವಾದ ಸೇನೆ”ಯಾಗಿ ರೂಪುಗೊಳ್ಳುತ್ತಿದೆ ಎಂದು ಜನರಲ್ ದ್ವಿವೇದಿ ತಿಳಿಸಿದರು.
“ತಂತ್ರಜ್ಞಾನ, ಸಮನ್ವಯತೆ ಮತ್ತು ಜಂಟಿ ಕಾರ್ಯಾಚರಣೆಗಳು ಸೇನಾ ಸಿದ್ಧತೆಯ ಪ್ರಮುಖ ಅಂಶಗಳಾಗಿವೆ. ಯುವ ಅಧಿಕಾರಿಗಳು ಮತ್ತು ಯೋಧರು ಈ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ,” ಎಂದು ಅವರು ಹೇಳಿದರು.




