ನವದೆಹಲಿ: ಐಪಿಎಲ್ 2026ರಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪ್ ಬಳಸಿದ ಪ್ರಕರಣಕ್ಕೆ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್‌ಗೆ ಪಂದ್ಯ ಶುಲ್ಕದ 25 ಶೇಕಡಾ ದಂಡ ವಿಧಿಸಲಾಗಿದ್ದು, ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ನ್ಯೂ ಚಂಡೀಗಢದಲ್ಲಿ ನಡೆದ ಪಂದ್ಯ ವೇಳೆ ಈ ಘಟನೆ ನಡೆದಿದ್ದು, ಐಪಿಎಲ್ ಆಡಳಿತ ಮಂಡಳಿ ಗುರುವಾರ ಅಧಿಕೃತ ಪ್ರಕಟಣೆ ನೀಡಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ರನ್ ಚೇಸ್ ಸಮಯದಲ್ಲಿ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪ್ ಬಳಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗಳಿಗೆ ಕಾರಣವಾಗಿತ್ತು.
ಐಪಿಎಲ್ ಪ್ರಕಟಣೆಯ ಪ್ರಕಾರ, ಪರಾಗ್ ನಡವಳಿಕೆ ಸಂಹಿತೆಯ ಲೆವೆಲ್-1 ಉಲ್ಲಂಘನೆ ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಅಮಿತ್ ಶರ್ಮಾ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
ಮೈದಾನ ಅಂಪೈರ್‌ಗಳಾದ ತನ್ಮಯ್ ಶ್ರೀವಾಸ್ತವ ಹಾಗೂ ನಿತಿನ್ ಮೆನನ್ ಈ ಘಟನೆ ಕುರಿತು ವರದಿ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಬಿಸಿಸಿಐ ರಾಜಸ್ಥಾನ್ ರಾಯಲ್ಸ್ ತಂಡ, ಅಧಿಕಾರಿಗಳು ಹಾಗೂ ಸಂಬಂಧಿತ ಆಟಗಾರರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಜರುಗಿಸುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿದೆ.
ಭಾರತದಲ್ಲಿ 2019ರ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆಯಡಿ ವೇಪ್ ಹಾಗೂ ಇ-ಸಿಗರೇಟ್ ಬಳಕೆ, ಮಾರಾಟ, ಖರೀದಿ, ಆಮದು ಹಾಗೂ ಜಾಹೀರಾತು ನಿಷೇಧಿಸಲಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡವು ಮುಂದಿನ ಪಂದ್ಯದಲ್ಲಿ ಜೈಪುರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.




