ನವದೆಹಲಿ: ಶಾಂತಿಯುತ ಪ್ರತಿಭಟನೆ ನಡೆಸುವ ವೇಳೆ ರಾಷ್ಟ್ರಧ್ವಜ ಪ್ರದರ್ಶಿಸಿದ ಯುವಕರನ್ನು ಜೈಲಿಗೆ ಕಳುಹಿಸಿರುವುದು ಹೇಡಿತನದ ಕ್ರಮ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಮತ್ತು ತ್ರಿವರ್ಣ ಧ್ವಜ ಪ್ರದರ್ಶಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.
ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಾ ರಾಷ್ಟ್ರಧ್ವಜ ಪ್ರದರ್ಶಿಸುವುದು ಅಪರಾಧವಲ್ಲ. ಇದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೃತ್ಯ. ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಹಾಗೂ ಇಂಡಿಯಾ ಮೈತ್ರಿಕೂಟದ ಹೋರಾಟಗಳು ಬೇರೆ ಬೇರೆ ವೇದಿಕೆಗಳಲ್ಲಿ ನಡೆಯುತ್ತಿದ್ದರೂ ಅವುಗಳ ಉದ್ದೇಶ ಒಂದೇ. ಸಂವಿಧಾನಬದ್ಧ ಹಕ್ಕುಗಳಿಗಾಗಿ ಧ್ವನಿ ಎತ್ತುವ ನಾಗರಿಕರ ಎಲ್ಲ ಪ್ರತಿಭಟನೆಗಳೂ ಒಂದೇ ಹೋರಾಟದ ಭಾಗವಾಗಿವೆ. ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು. ಅದನ್ನು ನಾವು ಮರಳಿ ಪಡೆಯುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷವು ಸಿಜೆಪಿ ಮತ್ತು ಅದರ ಪ್ರತಿಭಟನೆಗಳಿಂದ ಅಂತರ ಕಾಯ್ದುಕೊಂಡಿತ್ತು. ಇದೀಗ ರಾಹುಲ್ ಗಾಂಧಿ ಬಹಿರಂಗವಾಗಿ ಬೆಂಬಲ ಸೂಚಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಇಬ್ಬರು ನಾಯಕರಿಗೆ ನ್ಯಾಯಾಂಗ ಬಂಧನ:
ಪೊಲೀಸರ ಮಾಹಿತಿಯ ಪ್ರಕಾರ, ಪ್ರತಿಭಟನೆಗೆ ನಿಗದಿಪಡಿಸಿದ್ದ ಸ್ಥಳದ ಅನುಮತಿಯನ್ನು ಹಿಂಪಡೆದಿದ್ದರೂ ಜಂತರ್ ಮಂತರ್ ಪ್ರದೇಶಕ್ಕೆ ಪ್ರವೇಶಿಸಿ, ಶಾಂತಿ ಕಾಪಾಡುವ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿಜೆಪಿ ನಾಯಕರನ್ನು ಬಂಧಿಸಲಾಗಿದೆ. ಮಂಗಳವಾರ ಮುಂಜಾನೆ ಸೌರವ್ ದಾಸ್, ಆಶುತೋಷ್ ರಂಕಾ ಮತ್ತು ಸಿಜೆಪಿ ಸದಸ್ಯ ಅಜಿಂಕ್ಯ ಶಿಂಧೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅನುಮತಿಯಿಲ್ಲದೆ ಪ್ರತಿಭಟನಾ ಪ್ರದೇಶ ಪ್ರವೇಶಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಆರೋಪ ಅವರ ಮೇಲಿದೆ. ಬುಧವಾರ ಬೆಳಗ್ಗೆ ಮೂವರನ್ನೂ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ದಾಸ್ ಮತ್ತು ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಅಜಿಂಕ್ಯ ಶಿಂಧೆ ಅವರು ಆರು ತಿಂಗಳ ಕಾಲ ಶಾಂತಿ ಮತ್ತು ಉತ್ತಮ ನಡವಳಿಕೆಯನ್ನು ಕಾಪಾಡುವ ಷರತ್ತಿಗೆ ಒಪ್ಪಿಕೊಂಡಿದ್ದಾರೆ. ವೈಯಕ್ತಿಕ ಬಾಂಡ್ ಹಾಗೂ ₹5,000 ಮೊತ್ತದ ಜಾಮೀನುದಾರರ ಭದ್ರತೆಯ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮತ ಕಳ್ಳತನ’ ಆರೋಪ: ವಿಪಕ್ಷಗಳ ಜಂಟಿ ಹೋರಾಟ:
ಸಿಜೆಪಿ ನಾಯಕರಿಗೆ ನ್ಯಾಯಾಂಗ ಬಂಧನ ವಿಧಿಸುವುದಕ್ಕೂ ಒಂದು ದಿನ ಮೊದಲು ರಾಹುಲ್ ಗಾಂಧಿ ಆಯೋಜಿಸಿದ್ದ ಚಹಾಕೂಟದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಭಾಗವಹಿಸಿದ್ದರು. ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ‘ಮತ ಕಳ್ಳತನ’ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಹೋರಾಟವನ್ನು ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿತ್ತು. ಪ್ರಜಾಪ್ರಭುತ್ವದ ಪುನರ್ಸ್ಥಾಪನೆ ಮತ್ತು ಚುನಾವಣಾ ಅಕ್ರಮಗಳ ಆರೋಪಗಳಿಗೆ ಹೊಣೆಗಾರಿಕೆ ನಿಗದಿಪಡಿಸುವ ಉದ್ದೇಶದಿಂದ ಒಗ್ಗಟ್ಟಿನ ಹೋರಾಟ ಮುಂದುವರಿಸಲು ವಿಪಕ್ಷ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜಂತರ್ ಮಂತರ್ ಅನ್ನು ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗುವ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟಿರುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿದೆ. ಈ ನಿರ್ಧಾರವನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ನ. 1ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿ:
ವಿಪಕ್ಷಗಳ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಣಕು ಮಹಾಭಿಯೋಗ ಪ್ರಕ್ರಿಯೆ ನಡೆಸುವ ಪ್ರಸ್ತಾವನೆಯೂ ಇದರಲ್ಲಿ ಸೇರಿದೆ. ಪ್ರಯಾಣ ನಿರ್ಬಂಧಗಳನ್ನು ಪ್ರಶ್ನಿಸುವ ಸಲುವಾಗಿ ಸಂಸದರು ಮೆಟ್ರೋದಲ್ಲಿ ಪ್ರಯಾಣಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಜಂಟಿ ರ್ಯಾಲಿ ಆಯೋಜಿಸಲು ವಿಪಕ್ಷಗಳು ನಿರ್ಧರಿಸಿವೆ. ದೇಶದ ವಿವಿಧ ಭಾಗಗಳಿಂದ ಸುಮಾರು ಐದು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ. ಚುನಾವಣಾ ಅಕ್ರಮಗಳ ಆರೋಪ, ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಪ್ರತಿಭಟನೆಯ ಹಕ್ಕುಗಳ ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ವಿಸ್ತರಿಸಲು ವಿಪಕ್ಷಗಳು ಸಜ್ಜಾಗಿವೆ.




