ಅಮೆರಿಕ: ಫಿಫಾ ವಿಶ್ವಕಪ್‌ನಲ್ಲಿ ಆತಿಥೇಯ ರಾಷ್ಟ್ರ ಅಮೆರಿಕವನ್ನು ಸೋಲಿಸಿ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಹೊರಹಾಕಿದ ಬಳಿಕ, ಬೆಲ್ಜಿಯಂ ತಂಡವು ಅಮೆರಿಕದ ಆಟಗಾರ ಫೋಲರಿನ್ ಬಲೋಗುನ್ ಕೆಂಪು ಕಾರ್ಡ್ ವಿವಾದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದೆ.
ಅಮೆರಿಕ ವಿರುದ್ಧದ ಪಂದ್ಯಕ್ಕೂ ಮುನ್ನ, ಫಿಫಾ ವಿಶ್ವ ಫುಟ್‌ಬಾಲ್ ಸಂಸ್ಥೆ ಬಲೋಗುನ್‌ಗೆ ವಿಧಿಸಲಾಗಿದ್ದ ಒಂದು ಪಂದ್ಯ ನಿಷೇಧವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಬೋಸ್ನಿಯಾ-ಹರ್ಜೆಗೋವಿನಾ ವಿರುದ್ಧದ ಪಂದ್ಯದಲ್ಲಿ ರಕ್ಷಣಾ ಆಟಗಾರ ತಾರಿಕ್ ಮುಹರೆಮೊವಿಚ್ ವಿರುದ್ಧ ಮಾಡಿದ ಫೌಲ್‌ಗೆ ಬಲೋಗುನ್‌ಗೆ ಕೆಂಪು ಕಾರ್ಡ್ ತೋರಿಸಲಾಗಿತ್ತು.
ಈ ತೀರ್ಪು ಬೆಲ್ಜಿಯಂ ಫುಟ್‌ಬಾಲ್ ಅಸೋಸಿಯೇಷನ್‌ನ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ತೀರ್ಮಾನದ ಬಗ್ಗೆ “ಆಶ್ಚರ್ಯ” ವ್ಯಕ್ತಪಡಿಸಿದ್ದ ಬೆಲ್ಜಿಯಂ, ಯುರೋಪಿಯನ್ ಫುಟ್‌ಬಾಲ್ ಸಂಸ್ಥೆ (UEFA) ಕೂಡ ಈ ಕ್ರಮವನ್ನು ಖಂಡಿಸಿ, “ಇದು ಕೆಂಪು ಗೆರೆಯನ್ನು ದಾಟಿದಂತಾಗಿದೆ” ಎಂದು ಹೇಳಿತ್ತು. ಅಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬಲೋಗುನ್ ಮೇಲಿನ ಕೆಂಪು ಕಾರ್ಡ್ ಶಿಕ್ಷೆ ರದ್ದುಗೊಳಿಸಲು ಒತ್ತಡ ಹೇರಿದ್ದರು ಎಂಬ ವರದಿಗಳು ಹೊರಬಿದ್ದಿದ್ದವು.
ಅಮೆರಿಕ ವಿರುದ್ಧದ ಗೆಲುವಿನ ಬಳಿಕ, ಬೆಲ್ಜಿಯಂ ತಂಡದ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಂಭ್ರಮದ ಚಿತ್ರಗಳೊಂದಿಗೆ “Overturn this” (ಇದನ್ನೂ ರದ್ದು ಮಾಡಿ ನೋಡಿ) ಎಂಬ ಎರಡು ಪದಗಳ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಮೆರಿಕ ಮತ್ತು ಬಲೋಗುನ್ ವಿವಾದಕ್ಕೆ ತೀಕ್ಷ್ಣ ಟಾಂಗ್ ನೀಡಿತು.
ಪಂದ್ಯದ ಬಳಿಕ ಮಾತನಾಡಿದ ಬೆಲ್ಜಿಯಂ ನಾಯಕ ಯೂರಿ ಟಿಲೆಮ್ಯಾನ್ಸ್, “ಬಲೋಗುನ್ ವಿವಾದ ನಮ್ಮ ತಂಡಕ್ಕೆ ಹೆಚ್ಚುವರಿ ಪ್ರೇರಣೆ ನೀಡಿತು. ಆ ಸುದ್ದಿ ತಿಳಿದ ತಕ್ಷಣ ನಾವು ಸಭೆ ನಡೆಸಿ, ಮೈದಾನದಲ್ಲೇ ಉತ್ತರ ಕೊಡೋಣ ಎಂದು ತೀರ್ಮಾನಿಸಿದ್ದೆವು. ಇಂದು ಅದನ್ನೇ ಮಾಡಿದ್ದೇವೆ. ತಂಡದ ಪ್ರದರ್ಶನದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ,” ಎಂದು ಹೇಳಿದರು.
ಪಂದ್ಯದಲ್ಲಿ ಚಾರ್ಲ್ಸ್ ಡಿ ಕೆಟೆಲಾರೆ ಮೊದಲಾರ್ಧದಲ್ಲೇ ಎರಡು ಗೋಲುಗಳನ್ನು ದಾಖಲಿಸಿ ಬೆಲ್ಜಿಯಂಗೆ ಭರ್ಜರಿ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಅಮೆರಿಕ ವಿಶ್ವಕಪ್‌ನಿಂದ ಹೊರಬಿದ್ದ ಮೂರನೇ ಆತಿಥೇಯ ರಾಷ್ಟ್ರವಾಯಿತು. ಇದಕ್ಕೂ ಮುನ್ನ ಕೆನಡಾ ಮತ್ತು ಮೆಕ್ಸಿಕೋ ಕೂಡ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲೇ ನಿರ್ಗಮಿಸಿದ್ದವು.
ಈ ಗೆಲುವಿನೊಂದಿಗೆ ಬೆಲ್ಜಿಯಂ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪೋರ್ಚುಗಲ್ ತಂಡವನ್ನು ಸೋಲಿಸಿರುವ ಸ್ಪೇನ್ ವಿರುದ್ಧ ಜುಲೈ 11ರಂದು ಲಾಸ್ ಏಂಜಲೀಸ್ ಸ್ಟೇಡಿಯಂನಲ್ಲಿ ಸೆಣಸಲಿದೆ.




