ಯುಡಿ ನ್ಯೂಸ್ ಡಾಟ್ ಕಾಮ್
ಲಖನೌ: ರವೀಂದ್ರ ಜಡೇಜಾ ಉಪಯುಕ್ತ ಬ್ಯಾಟಿಂಗ್ ಹಾಗೂ ವೇಗಿಗಳ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನದ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡವು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಎದುರು 40 ರನ್‌ಗಳ ಗೆಲುವು ಪಡೆಯಿತು.
ಈ ಮೂಲಕ ಐದನೇ ಗೆಲುವಿನೊಂದಿಗೆ ರಿಯಾನ್ ಪರಾಗ್ ನಾಯಕತ್ವದ ಆರ್‌ಆರ್ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಸತತ ನಾಲ್ಕನೇ ಸೋಲು ಅನುಭವಿಸಿದ ರಿಷಭ್ ಪಂತ್ ಸಾರಥ್ಯದ ಲಖನೌ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿಯೇ ಉಳಿಯಿತು.
ಬುಧವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ್ದ 160 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಲಖನೌ ಸೂಪರ್ ಜಯಂಟ್ಸ್ ತಂಡ ಗೆಲುವು ಪಡೆಯಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇದಕ್ಕೆ ಆರ್‌ಆರ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಬೌಲರ್‌ಗಳು ಎದುರಾಳಿ ಎಲ್‌ಎಸ್‌ಜಿ ತಂಡವನ್ನು 18 ಓವರ್‌ಗಳಿಗೆ 119 ರನ್‌ಗಳಿಗೆ ಆಲ್‌ಔಟ್ ಮಾಡಿದರು. ಮಿಚೆಲ್ ಮಾರ್ಷ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಮೊತ್ತವನ್ನು ಕಲೆ ಹಾಕಲಿಲ್ಲ.




