ನವದೆಹಲಿ: ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಒಂದು ವಿಕೆಟ್ ನ ರೋಚಕ ಗೆಲುವು ದಾಖಲಿಸಿದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಯುವ ಆಟಗಾರರ ಅದ್ಭುತ ಪ್ರದರ್ಶನವನ್ನು ಶ್ಲಾಘಿಸಿರುವ ಅವರು, ಈ ಗೆಲುವು ದೇಶದ ಭವಿಷ್ಯದ ಕ್ರಿಕೆಟಿಗರಿಗೆ ದೊಡ್ಡ ಸ್ಫೂರ್ತಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
338 ರನ್ ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ಕೊನೆಯ ಓವರರ್ ನಲ್ಲಿ 9 ವಿಕೆಟ್ ಕಳೆದುಕೊಂಡು 339 ರನ್ ಗಳಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಕೊನೆಯ ಕ್ಷಣದವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಯುವ ಆಟಗಾರರು ತೋರಿದ ಹೋರಾಟಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಭಾರತ ತಂಡಕ್ಕೆ ಶುಭಾಶಯ ತಿಳಿಸಿದ್ದು, ಭಾರತೀಯ ಕ್ರಿಕೆಟ್ ಗೆ ಇದೊಂದು ಅದ್ಭುತ ದಿನವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಂಡರ್-19 ಏಷ್ಯಾಕಪ್ 2026ರ ಪ್ರಶಸ್ತಿ ಗೆದ್ದಿರುವ ಯುವ ಕ್ರಿಕೆಟಿಗರ ಬಗ್ಗೆ ಹೆಮ್ಮೆ ಇದೆ. ಅವರ ಸಾಧನೆ ಅನೇಕ ಯುವಕರಿಗೆ ಸ್ಫೂರ್ತಿಯಾಗಲಿದೆ. ಮುಂದಿನ ಪಂದ್ಯಗಳು ಹಾಗೂ ಭವಿಷ್ಯದ ಪ್ರಯತ್ನಗಳಿಗೆ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಕೊನೆಯ ಹಂತದಲ್ಲಿ ಮೋಹಿತ್ ಉಲ್ವಾ ಅಬ್ಬರ:
338 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 252 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕ್ರೀಸ್ ಗೆ ಬಂದ ಮೋಹಿತ್ ಉಲ್ವಾ ತಂಡದ ಪಾಲಿಗೆ ಆಪತ್ಬಾಂಧವರಾದರು. ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿದ ಮೋಹಿತ್, ಮನಾಲ್ ಚೌಹಾಣ್ ಜೊತೆಗೂಡಿ 57 ರನ್ ಗಳ ಮಹತ್ವದ ಜೊತೆಯಾಟವಾಡಿದರು. ಮನಾಲ್ ಕೂಡ 32 ಎಸೆತಗಳಲ್ಲಿ 47 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಬಳಿಕ ಚಿಗುರುಪತಿ ವೆಂಕಟ್ ಅವರೊಂದಿಗೆ ಕೊನೆಯ ವಿಕೆಟ್ ಗೆ ಅಜೇಯ 30 ರನ್ ಗಳ ಜೊತೆಯಾಟವಾಡಿದ ಮೋಹಿತ್ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.
ಪಾಕಿಸ್ತಾನದ ಪರ ಮೂವರಿಂದ ಭರ್ಜರಿ ಬ್ಯಾಟಿಂಗ್:
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳ ಬೃಹತ್ ಮೊತ್ತ ದಾಖಲಿಸಿತ್ತು. ಪಾಕಿಸ್ತಾನದ ಪರ ಉಸ್ಮಾನ್ ಖಾನ್ 111 ಎಸೆತಗಳಲ್ಲಿ 107 ರನ್ ಗಳಿಸಿ ಶತಕ ಸಿಡಿಸಿದರು. ಅಬ್ದುಲ್ ಖಾದಿರ್ 54 ಎಸೆತಗಳಲ್ಲಿ 80 ರನ್ ಗಳಿಸಿದರೆ, ನಾಯಕ ಫರ್ಹಾನ್ ಯೂಸುಫ್ 60 ಎಸೆತಗಳಲ್ಲಿ 63 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಭಾರತದ ಪರ ಕಾವ್ಯ ಪಟೇಲ್ 4 ವಿಕೆಟ್ ಕಬಳಿಸಿ ಮಿಂಚಿದರೆ, ಚಿಗುರುಪತಿ ವೆಂಕಟ್ 3 ವಿಕೆಟ್ ಪಡೆದು ಗಮನ ಸೆಳೆದರು.
ಟೂರ್ನಿ ಶ್ರೇಷ್ಠ ಆಟಗಾರನಾದ ಆರ್ಯವೀರ್ ಸೆಹ್ವಾಗ್:
ಇನ್ನು ಫೈನಲ್ ಪಂದ್ಯದಲ್ಲಿ 58 ರನ್ ಗಳಿಸಿದ್ದ ಆರ್ಯವೀರ್ ಸೆಹ್ವಾಗ್ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಐದು ಪಂದ್ಯಗಳಲ್ಲಿ ಒಟ್ಟು 361 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಒಟ್ಟಿನಲ್ಲಿ ಪಾಕಿಸ್ತಾನ ವಿರುದ್ಧದ ರೋಚಕ ಗೆಲುವಿನೊಂದಿಗೆ ಭಾರತ ಅಂಡರ್-19 ಏಷ್ಯಾಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು, ಯುವ ಕ್ರಿಕೆಟಿಗರ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಅಂಡರ್-19 ಏಷ್ಯಾಕಪ್ ಗೆದ್ದ ಭಾರತಕ್ಕೆ ಮೋದಿ ಅಭಿನಂದನೆ: ಯುವ ಕ್ರಿಕೆಟಿಗರ ಸಾಧನೆಗೆ ಮೆಚ್ಚುಗೆ




