ಇಸ್ಲಾಮಾಬಾದ್: ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ICC) ಮತ್ತೊಂದು ದೊಡ್ಡ ತಲೆನೋವು ಎದುರಾಗಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB), ಭಾರತ ತಂಡದ ವಿರುದ್ಧ ಆಡುವುದಿಲ್ಲ ಎಂದು ಘೋಷಿಸಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆ ಅನುಮಾನದಲ್ಲಿತ್ತು. ಸರ್ಕಾರದ ಅನುಮತಿಯಿಲ್ಲದೆ ತಂಡವನ್ನು ಕಳುಹಿಸಲಾಗುವುದಿಲ್ಲ ಎಂದು ಪಿಸಿಬಿ ಹೇಳಿಕೊಂಡಿತ್ತು. ಇದೀಗ ಪಾಕಿಸ್ತಾನ ಸರ್ಕಾರ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದು, ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಿ ತನ್ನ ಎಲ್ಲಾ ಗ್ರೂಪ್ ಪಂದ್ಯಗಳನ್ನು ಆಡಲಿದೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಆದರೆ, ಭಾರತ ವಿರುದ್ಧದ ಪಂದ್ಯವನ್ನು ಮಾತ್ರ ಬಹಿಷ್ಕರಿಸುವುದಾಗಿ ಹೇಳಿರುವುದು ಐಸಿಸಿಗೆ ಅಚ್ಚರಿ ಮೂಡಿಸಿದೆ.
ಫೆಬ್ರವರಿ 15ರ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಬ್ರೇಕ್
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ–ಪಾಕಿಸ್ತಾನ ಗುಂಪು ಹಂತದ ಪಂದ್ಯವನ್ನು ಆಡಲಾಗುವುದಿಲ್ಲ ಎಂದು ಪಿಸಿಬಿ ತಿಳಿಸಿದೆ. ರಾಜಕೀಯ ಮತ್ತು ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಿಸಿಬಿ ಹೇಳಿದೆ.
ಈ ಹಿಂದೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದರು. ನಂತರ ಸರ್ಕಾರದೊಂದಿಗೆ ಚರ್ಚಿಸಿ ತಂಡವನ್ನು ಪ್ರಕಟಿಸಲಾಗಿತ್ತು. ಆದರೆ ಭಾರತ ವಿರುದ್ಧದ ಪಂದ್ಯ ಕುರಿತು ಸ್ಪಷ್ಟತೆ ನೀಡಲಾಗಿರಲಿಲ್ಲ. ಇದೀಗ ಅಧಿಕೃತವಾಗಿ ಆ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಿಸಿಬಿ ಪ್ರಕಟಿಸಿದೆ.
ತಟಸ್ಥ ಸ್ಥಳದ ಪಂದ್ಯಕ್ಕೂ ನಿರಾಕರಣೆ
ಭಾರತದಲ್ಲಿ ಆಡಲು ಪಾಕಿಸ್ತಾನ ನಿರಾಕರಿಸಿದ್ದ ಕಾರಣ, ಐಸಿಸಿ ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಅದರಂತೆ ಭಾರತ–ಪಾಕಿಸ್ತಾನ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೂ, ಪಾಕಿಸ್ತಾನ ಸರ್ಕಾರ ಇದೀಗ ಭಾರತದ ವಿರುದ್ಧದ ಪಂದ್ಯವನ್ನೇ ಬಹಿಷ್ಕರಿಸಲು ತೀರ್ಮಾನಿಸಿದೆ.
ಐಸಿಸಿಗೆ ಭಾರಿ ಆರ್ಥಿಕ ನಷ್ಟದ ಆತಂಕ
ಟಿ20 ವಿಶ್ವಕಪ್ ವಿಚಾರದಲ್ಲಿ ಈಗಾಗಲೇ ಬಾಂಗ್ಲಾದೇಶ ತಂಡದ ಗೊಂದಲ ಐಸಿಸಿಯನ್ನು ಕಾಡುತ್ತಿದ್ದರೆ, ಇದೀಗ ಪಾಕಿಸ್ತಾನ ನೀಡಿರುವ ಈ ಹೊಸ ಟ್ವಿಸ್ಟ್ ಮತ್ತೊಂದು ದೊಡ್ಡ ತಲೆನೋವಾಗಿದೆ. ಭಾರತ–ಪಾಕಿಸ್ತಾನ ಪಂದ್ಯವು ವಿಶ್ವಕಪ್‌ನಲ್ಲೇ ಅತ್ಯಧಿಕ ವೀಕ್ಷಣೆ ಹಾಗೂ ಆದಾಯ ತರುವ ಪಂದ್ಯವಾಗಿರುವುದರಿಂದ, ಈ ಪಂದ್ಯ ರದ್ದಾದರೆ ಐಸಿಸಿಗೆ ಭಾರಿ ಆರ್ಥಿಕ ನಷ್ಟವಾಗುವುದು ಖಚಿತ ಎನ್ನಲಾಗಿದೆ.
ಇದೇ ವೇಳೆ, ಪಂದ್ಯ ಬಹಿಷ್ಕಾರದ ಪರಿಣಾಮ ಪಾಕಿಸ್ತಾನಕ್ಕೂ ಆರ್ಥಿಕ ಹಾಗೂ ಕ್ರೀಡಾತ್ಮಕ ನಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ವಲಯ ವಿಶ್ಲೇಷಣೆ ಮಾಡುತ್ತಿದೆ.




