ಕೊಲೊಂಬೋ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂಡರ್–19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಶನಿವಾರ ಬಾಂಗ್ಲಾದೇಶ ವಿರುದ್ಧ 18 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ ಸತತ ಎರಡನೇ ಜಯ ಸಾಧಿಸಿ, ಬಿ ಗುಂಪಿನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಶನಿವಾರ ಬೊಲೊವಿಯಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭದಲ್ಲಿ ಆಘಾತ ಎದುರಾಯಿತು. ನಾಯಕ ಆಯುಷ್ ಮಾತ್ರೆ (6), ವೇದಾಂತ್ ತ್ರಿವೇದಿ (0) ಮತ್ತು ವಿಹಾನ್ ಮಲ್ಹೋತ್ರಾ (7) ಬೇಗನೆ ವಿಕೆಟ್ ಕಳೆದುಕೊಂಡರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ವೈಭವ್ ಸೂರ್ಯವಂಶಿ ಅವರ ಆಕರ್ಷಕ ಬ್ಯಾಟಿಂಗ್ ತಂಡಕ್ಕೆ ಆಸರೆಯಾಯಿತು. ವೈಭವ್ 72 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ಪರಿಣಾಮ, ಭಾರತ 48.4 ಓವರ್‌ಗಳಲ್ಲಿ 238 ರನ್‌ಗಳನ್ನು ಕಲೆಹಾಕಿತು. ಬಾಂಗ್ಲಾದೇಶ ಪರ ಅಲ್ ಫಹಾದ್ 5 ವಿಕೆಟ್‌ಗಳನ್ನು ಪಡೆದು ಮಿಂಚಿದರು.
ಮಳೆಯ ಕಾರಣ ಪಂದ್ಯವನ್ನು ಕಡಿತಗೊಳಿಸಲಾಗಿದ್ದು, ಬಾಂಗ್ಲಾದೇಶಕ್ಕೆ 29 ಓವರ್‌ಗಳಲ್ಲಿ 165 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 28.3 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಪರ ವಿಹಾನ್ ಮಲ್ಹೋತ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಅವರು ನಾಲ್ಕು ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.




