Tuesday, September 15, 2026

ಹಳ್ಳಿಹುಡುಗನ ಯಶೋಗಾಥೆ! ಭಾರತ ಏಷ್ಯಾಕಪ್ ಟಿ-20 ಕ್ರಿಕೆಟ್ ಗೆ ಕೆರಾಡಿಯ ಸನಿತ್ ಆಯ್ಕೆ

ಕಿವುಡರ ಏಷ್ಯಾಕಪ್ ಟಿ-20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಏಕೈಕ ಕನ್ನಡಿಗ

ಉಡುಪಿ ಡಿಜಿಟಲ್ ನ್ಯೂಸ್ ಡಾಟ್ ಕಾಮ್ ವಿಶೇಷ ವರದಿ
ಕುಂದಾಪುರ:
ಕೆರಾಡಿ ಎಂಬ ಪುಟ್ಟ ಗ್ರಾಮವೊಂದರಲ್ಲಿ ಹುಟ್ಟಿ ಸಿನೆಮಾ ಲೋಕದಲ್ಲಿ ಜಗತ್ತೆ ನಿಬ್ಬೆರಗಾಗುವಂತೆ ಮಾಡಿದ ನಟ ರಿಷಬ್ ಶೆಟ್ಟಿಯವರ ಸಾಧನೆಯ ಕಥೆ ನಿಮಗೆಲ್ಲಾ ತಿಳಿದೇ ಇದೆ. ಆದರೆ ಇದೀಗ ಅದೇ ಊರಲ್ಲಿ ಹುಟ್ಟಿ ಬೆಳೆದು, ಕ್ರಿಕೆಟ್ ಆಟಗಾರನಾಗಿ ಬೆಳೆಯಬೇಕೆಂಬ ಕನಸು ಕಾಣುತ್ತಾ, ಆ ಕನಸಿನ ಬೆಂಬತ್ತಿ ಹೊರಟು ಸಾಧನೆಯ ಗಮ್ಯ ತಲುಪಿದ ಈ ಹುಡುಗನ ಅಸಾಧಾರಣ ಸಾಧನೆಯ ಯಶೋಗಾಥೆಯನ್ನು ನೀವು ಓದಲೇಬೇಕು.

‘ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ, ಮನಸ್ಸೊಂದಿದ್ದರೆ ಮಾರ್ಗವು ಉಂಟು…’ ಡಾ. ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಈ ಹಾಡು ಈ ಹುಡುಗನಿಗೆ ಸ್ಪೂರ್ತಿಯಾಯಿತೊ ಏನೊ ಗೊತ್ತಿಲ್ಲ. ಅಕ್ಷರಶಃ ಈ ಹಾಡಿನಂತೆ ಸಾಧನೆಯ ಶಿಖರವೇರಿ ರಾರಾಜಿಸುತ್ತಿರುವ ಈತನ ಹೆಸರು ಸನಿತ್ ಶೆಟ್ಟಿ.

ತಮ್ಮೂರಿನ ಹುಡುಗರಂತೆ ಟೆನ್ನಿಸ್ ಬಾಲ್ ಆಡುತ್ತಿದ್ದ ಕೆರಾಡಿಯ ಸನಿತ್ ಈಗ ಕಿವುಡರ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವೈಕಲ್ಯವೆಂದು ಕೊರಗುತ್ತ ಕುಳಿತುಕೊಳ್ಳದೇ ಅದನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆಯ ಶಿಖರವೇರುವ ಪ್ರಯತ್ನ ಮಾಡಿದ್ದಲ್ಲದೇ ಎಲ್ಲಾ ವಿಶೇಷ ಚೇತನರಿಗೂ ಮಾದರಿಯಾಗಿದ್ದಾರೆ.

ಕೆರಾಡಿಯ ದುರ್ಗಾ ಕ್ರಿಕೆಟರ್ಸ್ ಬಳಗದಲ್ಲಿ ಕ್ರಿಕೆಟ್ ಆಡುತ್ತಿದ್ದ ಕೆರಾಡಿಯ ಸನಿತ್ ಶೆಟ್ಟಿ ಫೆ.18 ರಿಂದ 25 ವರೆಗೆ ಒಡಿಶಾದ ಕಟಕ್ ನಲ್ಲಿರುವ ಬಾರಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಕಿವುಡರ ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಫೆ. 14 ರಿಂದ 17 ವರೆಗೆ ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯಗಳು ನಡೆಯಲಿವೆ.

ಭಾರತೀಯ ಕಿವುಡರ ಕ್ರಿಕೆಟ್ ಅಸೋಸಿಯೇಶನ್ ನ ಪುರುಷರ ಆಯ್ಕೆ ಸಮಿತಿಯು 16 ಮಂದಿಯ ಭಾರತ ತಂಡವನ್ನು ಪ್ರಕಟಿಸಿದ್ದು, ಬ್ಯಾಟರ್ ಹಾಗೂ ವೇಗದ ಬೌಲಿಂಗ್ ಸಹ ಮಾಡಬಲ್ಲ ಆಲ್ ರೌಂಡರ್ ಆಗಿರುವ ಸನಿತ್ ಶೆಟ್ಟಿ ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗನಾಗಿದ್ದಾರೆ. ಹಿಮಾಚಲ ಪ್ರದೇಶದ ವೀರೇಂದರ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ.

ರಿಕ್ಷಾ ಚಾಲಕರಾಗಿರುವ ಕೆರಾಡಿ ಗ್ರಾಮದ ಸುರೇಂದ್ರ ಶೆಟ್ಟಿ ಹಾಗೂ ಗೃಹಿಣಿಯಾದ ಶ್ರೀಮತಿ ಶೆಟ್ಟಿ ಹೊಸಗದ್ದೆ ದಂಪತಿಯ ಪುತ್ರನಾದ ಸನಿತ್ ಮೂಡ್ಲಕಟ್ಟೆಯಲ್ಲಿ ಜನಿಸಿದ್ದು, ಕುಂದಾಪುರದ ಹೆಚ್ ಎಂಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶ್ರೀ ವೆಂಕಟರಮಣ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಮೂಡ್ಲಕಟ್ಟೆಯ ಐಎಂಜೆ ಪದವಿ ಕಾಲೇಜಿನಲ್ಲಿ ಬಿಸಿಎ ಪೂರೈಸಿ, ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಹೆಚ್ ಆರ್ ಆಗಿದ್ದಾರೆ. ಇವರು ಹುಟ್ಟಿನಿಂದಲೇ ಶ್ರವಣ ದೋಷದ ಸಮಸ್ಯೆಯಿದ್ದು, ಅದನ್ನೆಲ್ಲ ಮೆಟ್ಟಿನಿಂತು ಈಗ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮೊದಲ ಬಾರಿಗೆ ಅವಕಾಶ:
ಆರಂಭದಲ್ಲಿ ನಿತಿನ್ ಸಾರಂಗ ಕ್ರಿಕೆಟ್ ತರಬೇತಿ ನೀಡಿದ್ದು, ಅನಂತರ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ನ ಮೊಹಮ್ಮದ್ ಅರ್ಮಾನ್ ಗರಡಿಯಲ್ಲಿ 21 ವರ್ಷದ ಸನಿತ್ ತರಬೇತಿ ಪಡೆಯುತ್ತಿದ್ದಾರೆ. ಭಾರತ ಪರ ಆಡಿದ ಕುಂದಾಪುರ ಮೂಲದ ವಿಶೇಷ ಚೇತನ ಕ್ರಿಕೆಟ್ ಆಟಗಾರ ಪೃಥ್ವಿರಾಜ್ ಶೆಟ್ಟಿ ಹುಂಚಣಿ ಸಹಕಾರ ನೀಡಿದ್ದಾರೆ. 2018 -19 ರಲ್ಲಿ ಅಂಡರ್ -14 ಮಂಗಳೂರು ವಲಯಕ್ಕೆ ಆಯ್ಕೆಯಾಗಿದ್ದು, ಉಡುಪಿ ಜಿಲ್ಲಾ ತಂಡಕ್ಕೂ ಆಯ್ಕೆಯಾಗಿದ್ದರು. ಅವರ ನಾಯಕತ್ವದಲ್ಲಿ ಭಾರತೀಯ ಕಿವುಡರ ಚಾಂಪಿಯನ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ವರ್ಷ ನಡೆದ 9 ನೇ ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಈ ಹಿಂದೆ ದುಬೈನಲ್ಲಿ ನಡೆಯುವ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ, ಆಗ ಪಾಸ್ ಪೋರ್ಟ್ ಮಾಡಿಸದೇ ಇದ್ದುದರಿಂದ ಅದೃಷ್ಟವಿರಲಿಲ್ಲ. ಈಗ ಮೊದಲ ಬಾರಿಗೆ ಸನಿತ್ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ.

ಇಷ್ಟು ದಿನದ ಶ್ರಮಕ್ಕೆ ಸಿಕ್ಕ ಫಲ
-ಸನಿತ್ ಶೆಟ್ಟಿ ಕೆರಾಡಿ, ಕ್ರಿಕೆಟ್ ಪಟು

ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ ಈ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ ಇತ್ತು. ಕೊನೆಗೂ ಭಾರತದ ಪರ ಆಡುವ ಕನಸು ನನಸಾಗುತ್ತಿದೆ. ಇಷ್ಟು ದಿನ ಪಟ್ಟ ಶ್ರಮಕ್ಕೆ ಸಿಕ್ಕ ಫಲವಿದು. ತುಂಬಾ ಖುಷಿಯಾಗುತ್ತಿದೆ. ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಸಹಕರಿಸಿದ ಹೆತ್ತವರು, ಗುರುಗಳು, ಎಲ್ಲರಿಗೂ ಕೃತಜ್ಞತೆಗಳು“.

More like this
Related

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರ ಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ

ಉಡುಪಿ: ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ...

ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಸಿ ಡಿಸೋಜಾ

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ...

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ಆಘಾತಕಾರಿ ಫಲಿತಾಂಶ: ಹೆಂಡತಿ, ಅಪ್ಪ, ಅಮ್ಮನ ವೋಟ್ ಯಾರಿಗೆ?

ಜೈಪುರ: ರಾಜಸ್ಥಾನ ನಾಗರಿಕ ಚುನಾವಣೆಯ ಫಲಿತಾಂಶದ ನಡುವೆ ಆಘಾತಕಾರಿ ಮತ್ತು ಆಸಕ್ತಿದಾಯಕ...

Copying is disabled on Udupi Digital News.