ಬೆಂಗಳೂರು: ಬೌರಿಂಗ್ ಆಸ್ಪತ್ರೆ ಆವರಣದ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ದುರಂತವನ್ನು ಕರ್ನಾಟಕ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ನಿರ್ಧರಿಸಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಡಳಿತದ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಅವರು, ಗೋಡೆಯ ಅಡಿಪಾಯ ದುರ್ಬಲವಾಗಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ ಎಂದು ಹೇಳಿದರು. “ಪ್ರತಿ ವರ್ಷ ಮಳೆ ಬರುತ್ತದೆ ಎಂಬುದು ಗೊತ್ತಿದ್ದರೂ, ಇಂತಹ ದುರ್ಬಲ ಗೋಡೆಗಳ ಪಕ್ಕದಲ್ಲಿ ವ್ಯಾಪಾರಿಗಳಿಗೆ ಅವಕಾಶ ನೀಡಿರುವುದು ಅಧಿಕಾರಿಗಳ ಬೇಜವಾಬ್ದಾರಿತನವನ್ನು ತೋರಿಸುತ್ತದೆ,” ಎಂದು ಹೇಳಿದರು.
ಕೇವಲ ಒಂದು ಗಂಟೆಯ ಮಳೆಯಲ್ಲೇ ಗೋಡೆ ಕುಸಿದಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಎಬ್ಬಿಸುತ್ತದೆ ಎಂದೂ ಅವರು ಸೂಚಿಸಿದರು.
ಉನ್ನತ ಅಧಿಕಾರಿಗಳಿಗೂ ಹೊಣೆಗಾರಿಕೆ
ಈ ಪ್ರಕರಣದಲ್ಲಿ ಕೆಳಹಂತದ ಸಿಬ್ಬಂದಿಯಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ಲೋಕಾಯುಕ್ತ ಅಭಿಪ್ರಾಯಪಟ್ಟಿದೆ.
ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳನ್ನು ಒಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಪ್ರಮುಖ ಅಧಿಕಾರಿಗಳ ವಿರುದ್ಧ ಕ್ರಮ ಸಾಧ್ಯತೆ
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪಾಲಿಕೆ ವಲಯ ಆಯುಕ್ತರ ವಿರುದ್ಧವೂ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.




