Tuesday, September 15, 2026

ಕಾವೇರಿ ಜಲವಿವಾದ | ಸೌಹಾರ್ದಯುತವಾಗಿ ಸಮಸ್ಯೆ ನಿವಾರಣೆಗೆ ಆದ್ಯತೆ: ಸರ್ವಪಕ್ಷ ಸಭೆಯಲ್ಲಿ ಡಿ.ಕೆ.ಶಿವಕುಮಾರ್

ಬೆಂಗಳೂರು: ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸೌಹಾರ್ದಯುತ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು. ಸದ್ಯ ಸಮಾಧಾನದ ಸಂಗತಿಯೇನೆಂದರೆ ಮಳೆ ಚೆನ್ನಾಗಿ ಆಗುತ್ತಿದೆ. ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿ ಇಂದು ಕೃಷ್ಣಾದಲ್ಲಿ ನಡೆದ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು.

ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೀರು ಸಂಗ್ರಹಿಸಿದ್ದೇವೆ. ಕಬಿನಿ ಜಲಾಶಯ ತುಂಬಿದೆ. ಹೆಚ್ಚುವರಿ ಒಳ ಹರಿವು ಸಂಗ್ರಹ ಮಾಡಿಟ್ಟುಕೊಳ್ಳಲು ಸಾಧ್ಯ ಇಲ್ಲ. ಹೀಗಾಗಿ ಸಹಜ ಹರಿವು ಮಾತ್ರ ಆಗುತ್ತಿದೆ. ಈಗಾಗಲೇ ನಾಲೆಗಳಿಗೂ ನೀರು ಹರಿದಿದೆ. ರೈತರಿಗೂ ಅನುಕೂಲ ಆಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಮಾತುಕತೆಗೆ ಬರುತ್ತೇನೆ ಅಂದಿದ್ರು. ಕಾವೇರಿ ಪರಿಸ್ಥಿತಿ ತಿಳಿಯಾದ ನಂತರ ಬರುವಂತೆ ಹೇಳಿದ್ದೇನೆ ಎಂದರು.

ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಕಾವೇರಿ ವಿವಾದವನ್ನು ನಾವೆಲ್ಲ ಮೈಗೆ ಅಂಟಿಸಿಕೊಂಡೇ ಬೆಳೆದಿದ್ದೇವೆ. ರಾಜಕೀಯಕ್ಕಿಂತ ರಾಜ್ಯದ ರೈತರ, ಜನರ ಹಿತ ಮುಖ್ಯ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ರಾಜಕಾರಣವನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳೂ ಒಟ್ಟಿಗೇ ನಿಂತಿರುವ ಚರಿತ್ರೆ ನಮ್ಮ ರಾಜ್ಯಕ್ಕೆ ಇದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ನಿಲುವು ನಮ್ಮದಾಗಿದೆ. ನಮ್ಮ ಈ ನಿಲುವಿಗೆ ತಾವೆಲ್ಲರೂ ಸಂಪೂರ್ಣ ಸಹಮತ ಹೊಂದಿದ್ದೀರಿ ಎನ್ನುವುದು ನನಗೆ ಗೊತ್ತಿದೆ ಎಂದು ಸಭೆಯನ್ನುದ್ದೇಶಿಸಿ ಹೇಳಿದರು.

ನಾನು CWRC, CWMA ಮೀಟಿಂಗ್ ಗೆ ಮೊದಲೇ ಕೇಂದ್ರ ಸಚಿವರಾದ ಸಿ.ಆರ್.ಪಾಟೀಲ್, ಪ್ರಹ್ಲಾದ್ ಜೋಶಿ, ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ವಿಚಾರ ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಕೂಡ ಕೇಂದ್ರದಲ್ಲಿ ರಾಜ್ಯದ ಪರ ಮಾತಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

ಹೊಸದಿಲ್ಲಿಯಲ್ಲಿ ನಡೆದ ಸಂಸತ್ ಸದಸ್ಯರ ಸಭೆಯಲ್ಲಿ ಪಕ್ಷಬೇಧ ಮರೆತು ಎಲ್ಲರೂ ರಾಜ್ಯದ ಪರ ನಿಲ್ಲುವ ಮಾತು ಕೊಟ್ಟಿದ್ದಾರೆ. ಅವರಿಗೂ ಧನ್ಯವಾದ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಜ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.

More like this
Related

 ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರ ಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ

ಉಡುಪಿ: ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ...

ಇತರರಿಗೆ ಸಹಾಯ ಮಾಡುವ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣಬಹುದು : ಬಿಷಪ್ ಲೆಸ್ಲಿ ಸಿ ಡಿಸೋಜಾ

ಉಡುಪಿ: ನಾವು ಕಣ್ಣಿನಿಂದ ದೇವರನ್ನು ನೋಡದೇ ಇದ್ದರೂ, ಕಷ್ಟಕಾಲದಲ್ಲಿ ನಮಗೆ ಸಹಾಯ...

ಬಿಜೆಪಿ ಅಭ್ಯರ್ಥಿಗೆ ಕೇವಲ 1 ಮತ, ಆಘಾತಕಾರಿ ಫಲಿತಾಂಶ: ಹೆಂಡತಿ, ಅಪ್ಪ, ಅಮ್ಮನ ವೋಟ್ ಯಾರಿಗೆ?

ಜೈಪುರ: ರಾಜಸ್ಥಾನ ನಾಗರಿಕ ಚುನಾವಣೆಯ ಫಲಿತಾಂಶದ ನಡುವೆ ಆಘಾತಕಾರಿ ಮತ್ತು ಆಸಕ್ತಿದಾಯಕ...

Copying is disabled on Udupi Digital News.