ಯುಡಿ ನ್ಯೂಸ್ ಡಾಟ್ ಕಾಮ್
ಬೀದರ್: ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆಯೇ ಗಾಳಿಪಟದ ದಾರ (ಮಾಂಜಾ) ಮತ್ತೊಮ್ಮೆ ಯಮಪಾಶವಾಗಿ ಪರಿಣಮಿಸಿದೆ. ಬೀದರ್ ಜಿಲ್ಲೆಯಲ್ಲಿ ಗಾಳಿಪಟದ ಹರಿತವಾದ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸಂಜುಕುಮಾರ್ ಹೊಸಮನಿ (48) ಮೃತ ದುರ್ದೈವಿ.
ರಕ್ತದ ಮಡುವಿನಲ್ಲಿ ಬಿದ್ದಿದ್ದರೂ, ಪ್ರಾಣ ಹೋಗುವ ಕೊನೆಯ ಕ್ಷಣದಲ್ಲಿ ತಮ್ಮ ಮಗಳಿಗೆ ಕರೆ ಮಾಡಲು ಅವರು ನಡೆಸಿದ ಪ್ರಯತ್ನದ ದೃಶ್ಯ ಎಂತವರ ಕರುಳನ್ನೂ ಹಿಂಡುವಂತಿದೆ.
ಸಂಜುಕುಮಾರ್ ಬೀದರ್ ಜಿಲ್ಲೆಯ ತಲಮಡಗಿ ಸೇತುವೆಯ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಸ್ತೆಗೆ ಅಡ್ಡಲಾಗಿ ಹಾರಾಡುತ್ತಿದ್ದ ಗಾಳಿಪಟದ ದಾರವೊಂದು ಏಕಾಏಕಿ ಸಂಜುಕುಮಾರ್ ಅವರ ಕುತ್ತಿಗೆಗೆ ಸುತ್ತಿಕೊಂಡಿದೆ. ಬೈಕ್ ವೇಗದಲ್ಲಿದ್ದ ಕಾರಣ ದಾರವು ಕತ್ತರಿಯಂತೆ ಕುತ್ತಿಗೆಯನ್ನು ಸೀಳಿದೆ. ತೀವ್ರವಾಗಿ ಗಾಯಗೊಂಡ ಅವರು ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ.
ಕುತ್ತಿಗೆಯಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿದ್ದರೂ, ಸಂಜುಕುಮಾರ್ ಅವರು ಎದೆಗುಂದದೆ ತಮ್ಮ ಮೊಬೈಲ್ ಮೂಲಕ ಮಗಳಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ರಕ್ತಸಿಕ್ತ ಬಟ್ಟೆಯಲ್ಲಿ ಅವರು ಫೋನ್ ಡಯಲ್ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದ್ದು, ನೋಡುಗರ ಎದೆ ನಡುಗಿಸುವಂತ್ತಿತ್ತು.
ದಾರಿಹೋಕರೊಬ್ಬರು ಇದನ್ನು ಗಮನಿಸಿ, ತಕ್ಷಣವೇ ರಕ್ತಸ್ರಾವವನ್ನು ತಡೆಯಲು ಗಾಯದ ಮೇಲೆ ಬಟ್ಟೆಯನ್ನು ಒತ್ತಿಹಿಡಿದಿದ್ದಾರೆ. ಸ್ಥಳೀಯರು ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ಆಂಬ್ಯುಲೆನ್ಸ್ ಬರುವ ಹೊತ್ತಿಗೆ ತೀವ್ರ ರಕ್ತಸ್ರಾವದಿಂದ ಸಂಜುಕುಮಾರ್ ಅವರು ಕೊನೆಯುಸಿರೆಳೆದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾರಕವಾಗುತ್ತಿದೆ ‘ಚೈನೀಸ್ ಮಾಂಜಾ’
ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ದೇಶದ ಹಲವು ಭಾಗಗಳಲ್ಲಿ ಒಂದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಹಿಂದೆ ಗಾಳಿಪಟ ಹಾರಿಸಲು ಹತ್ತಿಯ ದಾರಕ್ಕೆ ಗಾಜಿನ ಪುಡಿ ಲೇಪಿಸಿ ಬಳಸಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಹತ್ತಿ ದಾರದ ಬದಲಿಗೆ ಪ್ಲಾಸ್ಟಿಕ್ ಅಥವಾ ನೈಲಾನ್ ದಾರಗಳು ಮಾರುಕಟ್ಟೆಯನ್ನು ಆವರಿಸಿವೆ. ಈ ದಾರಗಳು ಬ್ಲೇಡ್‌ಗಿಂತಲೂ ಹರಿತವಾಗಿರುತ್ತವೆ. ಬೈಕ್ ಸವಾರರು ವೇಗವಾಗಿ ಹೋಗುವಾಗ ಈ ಸಣ್ಣ ದಾರಗಳು ಕಣ್ಣಿಗೆ ಕಾಣಿಸುವುದಿಲ್ಲ. ಕುತ್ತಿಗೆ ಅಥವಾ ದೇಹಕ್ಕೆ ತಗುಲಿದ ತಕ್ಷಣ ಚರ್ಮ ಮತ್ತು ಮಾಂಸವನ್ನು ಸೀಳಿಬಿಡುತ್ತವೆ. ಇವುಗಳನ್ನು ಆಡುಭಾಷೆಯಲ್ಲಿ ‘ಚೈನೀಸ್ ಮಾಂಜಾ’ ಎಂದು ಕರೆಯಲಾಗುತ್ತದೆ. ನಿಷೇಧವಿದ್ದರೂ ಸಹ ಈ ಮಾರಕ ದಾರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅಮಾಯಕರ ಜೀವ ಬಲಿಪಡೆಯುತ್ತಿವೆ. ಕಳೆದ ಸೋಮವಾರವಷ್ಟೇ ಮಧ್ಯಪ್ರದೇಶದ ಇಂದೋರ್‌ನಲ್ಲಿ ರಘುವೀರ್ ಧಾಕರ್ (45) ಎಂಬುವವರು ಇದೇ ರೀತಿ ಗಾಳಿಪಟದ ದಾರಕ್ಕೆ ಕುತ್ತಿಗೆ ಸೀಳಿಕೊಂಡು ಸಾವನ್ನಪ್ಪಿದ್ದರು. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಜುಲೈ 2025ರಲ್ಲಿ ರಾಣಿ ಝಾನ್ಸಿ ಫ್ಲೈಓವರ್ ಮೇಲೆ ಯಶ್ ಗೋಸ್ವಾಮಿ (22) ಎಂಬ ಯುವಕ ಸ್ಕೂಟರ್‌ನಲ್ಲಿ ಹೋಗುವಾಗ ಮಾಂಜಾ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿದ್ದರು. ಜುಲೈ 2023ರಲ್ಲಿ ಪಶ್ಚಿಮ ವಿಹಾರ್ ಪ್ರದೇಶದಲ್ಲಿ ಏಳು ವರ್ಷದ ಬಾಲಕನೊಬ್ಬ ಈ ದಾರಕ್ಕೆ ಬಲಿಯಾಗಿದ್ದನು.




