ಯುಡಿ ನ್ಯೂಸ್ ಡಾಟ್ ಕಾಮ್
ಬೆಂಗಳೂರು: ಈ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೂ ಮತ್ತು ಈಗಿನ ಸಿದ್ದರಾಮಯ್ಯ ಅವರಿಗೂ ಬಹಳ ವ್ಯತ್ಯಾಸವಿದೆ. ಈಗ ಸಿಎಂ ಕುರ್ಚಿ ಬಿಟ್ಟುಕೊಡಲು ಸಿದ್ದರಾಮಯ್ಯ ತಯಾರಾಗಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಕೆಎನ್ ರಾಜಣ್ಣ ಸುದ್ದಿಯಲ್ಲಿದ್ದಾರೆ.
ರಾಜ್ಯ ‘ಕೈ’ ಪಾಳಯದಲ್ಲಿ ಅಧಿಕಾರ ಹಸ್ತಾಂತರದ ಕುರಿತು ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕೆಎನ್ ರಾಜಣ್ಣ ನೀಡಿರುವ ಈ ಹೇಳಿಕೆ ಇದೀಗ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಕೆ ಎನ್ ರಾಜಣ್ಣ, ಅಧಿಕಾರ ಶಾಶ್ವತವಲ್ಲ, ಅಧಿಕಾರ ಕಳೆದುಕೊಂಡವರು ಮತ್ತೆ ಗಳಿಸುತ್ತಾರೆ. ರಾಹುಲ್ ನಿರ್ದೇಶನದಂತೆ ಹೋಗಬೇಕು ಎನ್ನುವುದು ಮುಖ್ಯಮಂತ್ರಿಗಳ ಮನಸ್ಥಿತಿಯಾಗಿದೆ. ಆದರೆ ಸಿದ್ದರಾಮಯ್ಯ ಅವರೇ ಮುಂದುವರೆಯಬೇಕು ಅನ್ನೋದು ನಮ್ಮ ಅಭಿಪ್ರಾಯ. ಇದನ್ನೇ ನಾವೆಲ್ಲಾ ಹೈಕಮಾಂಡ್ಗೂ ಹೇಳಿದ್ದೇವೆ ಎಂದು ರಾಜಣ್ಣ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯೋಕು ಸಿದ್ಧರಾಗಿದ್ದು, ಅಧಿಕಾರ ಬಿಟ್ಟು ಕೊಡಲು ಕೂಡ ರೆಡಿಯಾಗಿದ್ದಾರೆ. ಅಧಿಕಾರ ಬದಲಾವಣೆಯ ವಿಷಯವಾಗಿ ಗೊಂದಲ ಮುಂದುವರಿಯಲು ಹೈಕಮಾಂಡ್ ಅವಕಾಶ ನೀಡಬಾರದು ಎಂದು ಆಗ್ರಹಿಸಿರುವ ರಾಜಣ್ಣ, ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿದ್ದರಾಮಯ್ಯ ಬದ್ದರಾಗಿದ್ದಾರೆ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ ಪಕ್ಷ ಹಾಗೂ ರಾಜ್ಯದ ಜನತೆಯ ಭವಿಷ್ಯವೇ ಇದರಲ್ಲಿದೆ ಎಂದು ಹೇಳಿದ್ದಾರೆ.
ಹೀಗಾಗಿ ಹೈಕಮಾಂಡ್ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ರಾಹುಲ್ ಗಾಂಧಿ ಹೇಳಿದ್ದನ್ನು ಪಾಲನೆ ಮಾಡುತ್ತೇನೆ, ಆಗಲೂ ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಸಿಎಂ ಹೇಳಿದ್ದಾರೆ. ರಾಹುಲ್ ಗಾಂಧಿ ಏನು ತೀರ್ಮಾನ ಕೊಡುತ್ತಾರೆ ಅದರಂತೆ ನಡೆಯೋಣ ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ.




