Tuesday, November 10, 2026

ಮೈಸೂರು ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ: ಪ್ರತಾಪ್ ಸಿಂಹ ಬೆಂಬಲಿಗನಿಗೆ ಜೀವ ಬೆದರಿಕೆ ಆರೋಪ

ಮೈಸೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಂತರಿಕ ಭಿನ್ನಮತ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ಎಲ್. ನಾಗೇಂದ್ರ ಅವರ ಬೆಂಬಲಿಗರ ನಡುವಿನ ರಾಜಕೀಯ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಅಧಿಕೃತ ಸಮಾವೇಶವೊಂದರಲ್ಲಿ ಮಾಜಿ ಶಾಸಕ ಎಲ್. ನಾಗೇಂದ್ರ ಸ್ವಾಗತ ಭಾಷಣ ಮಾಡಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಪ್ರತಾಪ್ ಸಿಂಹ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಪ್ರತಾಪ್ ಸಿಂಹ ಅಭಿಮಾನಿ ಹಾಗೂ ಬಿಜೆಪಿ ಕಾರ್ಯಕರ್ತ ರಾಜಚಾರಿ ಸಭೆಯಲ್ಲೇ ಈ ಬಗ್ಗೆ ಪ್ರಶ್ನಿಸಿ ಗೊಂದಲ ಸೃಷ್ಟಿಸಿದ್ದರು. ಈ ಘಟನೆ ಇದೀಗ ಪಕ್ಷದೊಳಗಿನ ಭಿನ್ನಮತಕ್ಕೆ ಮತ್ತಷ್ಟು ಕಿಡಿ ಹೊತ್ತಿಸಿದೆ.

ಸಮಾವೇಶದಲ್ಲಿ ಗಲಾಟೆ ನಡೆದ ಬಳಿಕ ಎಲ್. ನಾಗೇಂದ್ರ ಅವರ ಬೆಂಬಲಿಗರು ತನ್ನನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ ಎಂದು ರಾಜಚಾರಿ ಆರೋಪಿಸಿದ್ದಾರೆ. “ನನ್ನನ್ನು ಕೂಡಿ ಹಾಕಿ ಹೆದರಿಸಿದ್ದಾರೆ. ಬಲವಂತವಾಗಿ ಮೊಬೈಲ್‌ನಲ್ಲಿ ತಪ್ಪೊಪ್ಪಿಗೆಯ ವಿಡಿಯೋ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರತಾಪ್ ಸಿಂಹ ಪರವಾಗಿ ಮಾತನಾಡಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ” ಎಂದು ರಾಜಚಾರಿ ಕಣ್ಣೀರಿಡುತ್ತಾ ದೂರಿದ್ದಾರೆ.

ಚಾಮರಾಜ ವಿಧಾನಸಭಾ ಕ್ಷೇತ್ರವು ಪ್ರತಾಪ್ ಸಿಂಹ ಮತ್ತು ಎಲ್. ನಾಗೇಂದ್ರ ಅವರ ರಾಜಕೀಯ ಆಸಕ್ತಿಯ ಕೇಂದ್ರವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಇಬ್ಬರೂ ನಾಯಕರು ಆಕಾಂಕ್ಷೆ ಹೊಂದಿದ್ದಾರೆ ಎನ್ನಲಾಗಿದ್ದು, ಇದೇ ವಿಚಾರವಾಗಿ ಕಳೆದ ಕೆಲವು ತಿಂಗಳುಗಳಿಂದ ಇಬ್ಬರ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯ ಮತ್ತು ಸಂಘರ್ಷ ಮುಂದುವರಿದಿದೆ.

ಕೆಲವು ದಿನಗಳ ಹಿಂದೆ ನಡೆದ ಪ್ರತಿಭಟನೆಯೊಂದರಲ್ಲಿಯೂ ಇಬ್ಬರು ನಾಯಕರು ರಾಜ್ಯ ಬಿಜೆಪಿ ಮುಖಂಡರ ಸಮ್ಮುಖದಲ್ಲೇ ಪರಸ್ಪರ ನೂಕಾಟ-ತಳ್ಳಾಟ ನಡೆಸಿದ್ದರು ಎನ್ನಲಾಗಿದೆ. ಇದೀಗ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿರುವ ಆರೋಪದೊಂದಿಗೆ ಚಾಮರಾಜ ಕ್ಷೇತ್ರದ ಬಿಜೆಪಿ ಆಂತರಿಕ ಭಿನ್ನಮತ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

More like this
Related

ಎಡ್ಮೇರು: ರಸ್ತೆ ಬದಿಯ ಗೋಡೆಗೆ ಬೈಕ್ ಡಿಕ್ಕಿ ಹೊಡೆದು ಯುವಕ ಮೃತ್ಯು

ಉಡುಪಿ: ಕಾರ್ಕಳ- ಮೂಡುಬೆಳ್ಳೆ-ಉಡುಪಿ ರಾಜ್ಯ ಹೆದ್ದಾರಿಯ ಎಡೇರು ಬಳಿ ಬೈಕೊಂದು ವಾಹನ...

ಉರ್ದು ಅಕಾಡೆಮಿಗೆ ಅನುದಾನ ಹೆಚ್ಚಳ; ಅಲ್ಪಸಂಖ್ಯಾತ ಧರ್ಮಗಳ ಸಮಸ್ಯೆ ಆಲಿಕೆಗೆ ಪ್ರತ್ಯೇಕ ಸಭೆ: ಸಿಎಂ ಡಿ ಕೆ ಶಿವಕುಮಾರ್ ಭರವಸೆ

ಬೆಂಗಳೂರು, ನ.9: "ಉರ್ದು ಅಕಾಡೆಮಿಯ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಜತೆಗೆ, ಅಲ್ಪಸಂಖ್ಯಾತ...

ಸಾಸ್ತಾನ : ಚರ್ಚಿಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಕೋಟ: ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ...

ನಿರಂತರ ಕಲಿಕೆ ಅಭಿವೃದ್ಧಿಗೆ ಅಗತ್ಯ, ಸದಾ ಬದಲಾವಣೆಗೆ ಹೊಂದಿಕೊಳ್ಳಿ: ಶಶಿ ಶೇಖರ್ ವೆಂಪತಿ ಅಭಿಪ್ರಾಯ

ನಿಟ್ಟೆ ವಿವಿ 16ನೇ ಘಟಿಕೋತ್ಸವ ಮೂರನೇ ಅಧಿವೇಶನ | 839 ವಿದ್ಯಾರ್ಥಿಗಳಿಗೆ...

Copying is disabled on Udupi Digital News.