ಯುಡಿ ನ್ಯೂಸ್ ಡಾಟ್ ಕಾಮ್
ಬೆಂಗಳೂರು: ಬುಧವಾರ ಸಂಜೆ 4.05 ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಕರ್ನಾಟಕದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಹೊಸ ಸಚಿವ ಸಂಪುಟ ರಚನೆಯನ್ನು ಅಂತಿಮಗೊಳಿಸಿದ್ದಾರೆ.
ಕಳೆದ ವಾರವಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬಳಿಕ ಎಲ್ಲರ ಕುತೂಹಲ ಕೆರಳಿಸಿರುವ ಸಚಿವರ ಪಟ್ಟಿ ಬುಧವಾರ ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಲಿದೆ. ಈ ಮೂಲಕ ಎಲ್ಲಾ ಉಹಾಪೋಹಗಳಿಗೂ ತೆರೆ ಬೀಳುವ ಸಾಧ್ಯತೆ ಇದೆ. ಕೆಲವರ ಹೆಸರುಗಳು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದು ಯಾವುದು ಅಧಿಕೃತವಲ್ಲ ಎಂಬುದಾಗಿ ಕೂಡ ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ನೂತನ ಸಚಿವರ ಪಟ್ಟಿ ಇಂದು ಮಧ್ಯಾಹ್ನದೊಳಗೆ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಚಿವರ ಆಯ್ಕೆ ವಿಚಾರವಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಹೆಸರುಗಳು ಅಧಿಕೃತವಲ್ಲ. ಬುಧವಾರ ಮಧ್ಯಾಹ್ನದ ವೇಳೆಗೆ ಹೈಕಮಾಂಡ್ ನಾಯಕರು ಸಚಿವರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಸಚಿವರ ಆಯ್ಕೆ ಕುರಿತು ಹೈಕಮಾಂಡ್ ನಾಯಕರು ಚರ್ಚೆ ನಡೆಸಿದ್ದಾರೆ. ನಾವು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ನಾಯಕರು ಮಾಡಲಿದ್ದಾರೆ. ದೆಹಲಿ ನಾಯಕರು ನಮಗೆ ಪಟ್ಟಿ ರವಾನೆ ಮಾಡಿದ ಬಳಿಕ ನಾವು ಅದನ್ನು ರಾಜಭವನಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.
ಬುಧವಾರ ಸಂಜೆ ನಡೆಯಬೇಕಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಬೇರೊಂದು ದಿನ ನಡೆಸಲು ತೀರ್ಮಾನಿಸಿದ್ದೇವೆ. ಆಹ್ವಾನ ಪತ್ರಿಕೆ ಪಡೆದಿರುವ ಬ್ಲಾಕ್, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿಯವರು ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನಕ್ಕೆ ಆಗಮಿಸಬೇಕು ಎಂದರು.
ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಲೋಕ ಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೀಳ್ಕೊಟ್ಟು ಭಾರತ ಜೋಡೋ ಭವನದಲ್ಲಿ ಭೇಟಿ ಎಲ್ಲರನ್ನೂ ಭೇಟಿ ಮಾಡುವುದಾಗಿ ಅವರು ಹೇಳಿದರು.




