ಬೆಂಗಳೂರು : ಜೈಲಿನಲ್ಲಿರುವ ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಸೌಕರ್ಯಗಳ ಕುರಿತು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಡಿಜಿಪಿ ಅಲೋಕ್ ಕುಮಾರ್ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮವಹಿಸುವಂತೆ ರಾಜ್ಯ ಎಲ್ಲಾ ಜೈಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಚಾರಣಾಧೀನ ಕೈದಿಗಳು ಮತ್ತು ಸಿವಿಲ್ ಕೈದಿಗಳಿಗೆ ಆಹಾರ, ಹಾಸಿಗೆ ಮತ್ತು ಬಟ್ಟೆಗಳನ್ನು ಒದಗಿಸುವ ಬಗ್ಗೆ ಮೊದಲ ಬಾರಿಗೆ ನಿಯಮಗಳನ್ನು ರೂಪಿಸಲಾಗಿದೆ. ನಾವು ಹೊರಗಿನಿಂದ ಯಾವುದೇ ಆಹಾರವನ್ನು ಅನುಮತಿಸುವುದಿಲ್ಲ. ಬೆಂಗಳೂರು ಜೈಲಿನ ಆಹಾರವನ್ನು FSSAI ಪ್ರಮಾಣೀಕರಿಸಿದೆ ಮತ್ತು ಉತ್ತಮ ಗುಣಮಟ್ಟದ್ದಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಸೂತ್ತೋಲೆಯಲ್ಲೇನಿದೆ?
ವಿಚಾರಣಾಧೀನ ಆರೋಪಿಗೆ ಜೈಲಿನಲ್ಲಿ ಕೊಡುವ ಬ್ಲಾಂಕೆಟ್ ಬಳಸಬೇಕು. ಹೆಚ್ಚುವರಿಯಾಗಿ ಒಂದು ಬ್ಲಾಂಕೆಟ್ ನೀಡಲಾಗುತ್ತೆ. ಯಾವುದೇ ಹಾಸಿಗೆಯ ಸೌಲಭ್ಯ ಇರುವುದಿಲ್ಲ. ಇನ್ನು ಕೈದಿಗಳಿಗೆ ಆಹಾರ, ಬಟ್ಟೆ, ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಸೂಚಿಸಲಾಗಿದ್ದು, ಜೈಲಿನ ನಿಯಾಮವಳಿ ಪ್ರಕಾರ ಆಹಾರ, ಬಟ್ಟೆ, ಹಾಸಿಗೆ ನೀಡಲಾಗುತ್ತದೆ. ಇನ್ನು ಸಂದರ್ಶನ ವೇಳೆ ಕೈದಿಗಳಿಗೆ ಖಾಸಗಿ ವ್ಯಕ್ತಿಗಳಿಂದ ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಪೂರೈಕೆಗೆ ಸೂಚಿಸಲಾಗಿದೆ.
ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಪೂರೈಕೆ
ನಿರ್ದಿಷ್ಟ ಪ್ರಮಾಣದಲ್ಲಿ ಪ್ಯಾಕ್ ಮಾಡಿರುವ ಆಹಾರ ನೀಡಲು ಅವಕಾಶವಿದ್ದು, ಬಾಳೆಹಣ್ಣು, ಸೇಬು, ಸೀಬೆಹಣ್ಣು, ಸಪೋಟ ಸೇರಿ 2 ಕೆಜಿಯಷ್ಟಿರಬೇಕು. ಡ್ರೈಫ್ರೂಟ್ಸ್, ಬೇಕರಿ ತಿನಿಸು ಸೇರಿದಂತೆ 500 ಗ್ರಾಮ್ ಮೀರುವಂತಿಲ್ಲ. ವಿಚಾರಣಾಧೀನ ಕೈದಿಗಳಿಗೆ 2 ಜೊತೆ ಬಟ್ಟೆ, 2 ಒಳಉಡುಪು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಜೈಲಿನಲ್ಲಿ ದೈಹಿಕ ತಪಾಸಣೆ, ಸೆಕ್ಯೂರಿಟಿ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದು, ಅಗತ್ಯವಿದ್ದರೆ ಜೈಲಿನ ಅಧಿಕಾರಿಗಳಿಂದ ಯಾವುದೇ ರೀತಿಯ ತಪಾಸಣೆ ಮಾಡಬಹುದು. ತಕ್ಷಣವೇ ಈ ನಿಯಮ ಜಾರಿಮಾಡುವಂತೆ ರಾಜ್ಯ ಎಲ್ಲಾ ಜೈಲಾಧಿಕಾರಿಗಳಿಗೆ ಕಾರಾಗೃಹ ಡಿಜಿಪಿ ಸುತ್ತೋಲೆ ಹೊರಡಿಸಿದ್ದಾರೆ.
- ಕರ್ನಾಟಕ ಕಾರಾಗೃಹ ಕಾಯ್ದೆ, 1963 ರ ಸೆಕ್ಷನ್ 30, ವಿಚಾರಣಾಧೀನ ಕೈದಿಗಳು ಮತ್ತು ಶಿಕ್ಷೆಗೊಳಗಾಗದ ಕ್ರಿಮಿನಲ್ ಕೈದಿಗಳು, ಖಾಸಗಿ ಮೂಲಗಳಿಂದ ಆಹಾರ, ಬಟ್ಟೆ, ಹಾಸಿಗೆ ಅಥವಾ ಇತರ ಅಗತ್ಯ ವಸ್ತುಗಳನ್ನು ಸರಿಯಾದ ಸಮಯದಲ್ಲಿ, ಪರೀಕ್ಷೆಗೆ ಒಳಪಟ್ಟು ಮತ್ತು ಇನ್ಸ್ಪೆಕ್ಟರ್ ಜನರಲ್ ಅನುಮೋದಿಸಬಹುದಾದ ನಿಯಮಗಳಿಗೆ ಅನುಸಾರವಾಗಿ ಖರೀದಿಸುವ ಅಥವಾ ಸ್ವೀಕರಿಸುವ ಮೂಲಕ ತಮ್ಮನ್ನು ತಾವು ನಿರ್ವಹಿಸಲು ಅನುಮತಿಸುತ್ತದೆ.
- ಕೈದಿಗಳು ಮತ್ತು ಶಿಕ್ಷೆಗೊಳಗಾಗದ ಕ್ರಿಮಿನಲ್ (ವಿಚಾರಣೆಯಲ್ಲಿರುವ) ಕೈದಿಗಳು ಸೇರಿದಂತೆ ಎಲ್ಲಾ ಕೈದಿಗಳಿಗೆ ಕರ್ನಾಟಕ ಕಾರಾಗೃಹ ಕಾಯ್ದೆ, 1963, ಕರ್ನಾಟಕ ಕಾರಾಗೃಹ ನಿಯಮಗಳು, 1974 ಮತ್ತು ಕರ್ನಾಟಕ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ, 2021 ರ ಪ್ರಕಾರ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಇಲಾಖೆಯು ಈಗಾಗಲೇ ಸಾಕಷ್ಟು ಆಹಾರ, ಬಟ್ಟೆ ಮತ್ತು ಹಾಸಿಗೆಗಳನ್ನು ಒದಗಿಸುತ್ತಿದೆ.
- ಜೈಲು ಭದ್ರತೆ, ಸುರಕ್ಷತೆ, ಸಿಬ್ಬಂದಿ ಕೊರತೆ, ಜನದಟ್ಟಣೆ, ಆಡಳಿತಾತ್ಮಕ ಕಾರ್ಯಸಾಧ್ಯತೆ ಮತ್ತು ಆರೋಗ್ಯ ಕಾಳಜಿಗಳ ಸಮಸ್ಯೆಗಳನ್ನು ಪರಿಗಣಿಸಿ, ಖಾಸಗಿ ಮೂಲಗಳಿಂದ ಆಹಾರ, ಬಟ್ಟೆ ಮತ್ತು ಹಾಸಿಗೆಗಳ ಸ್ವೀಕೃತಿಯನ್ನು ನಿಯಂತ್ರಿಸುವುದು ಮತ್ತು ನಿರ್ಬಂಧಿಸುವುದು ಅಗತ್ಯವಾಗಿದೆ.




