ಚಿಕ್ಕಮಗಳೂರು: ಅಂಚೆ ಮತಪತ್ರಗಳ ಮರುಎಣಿಕೆಯಲ್ಲಿ ಫಲಿತಾಂಶ ಏರುಪೇರಾಗಿ ಬಿಜೆಪಿಯ ಡಿ.ಎನ್. ಜೀವರಾಜ್ ಶೃಂಗೇರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಹೈಕೋರ್ಟ್ ಆದೇಶದ ಮೇರೆಗೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಕಾರ್ಯ ಮೇ 2ರಂದು ಮುಕ್ತಾಯಗೊಂಡಿತ್ತು. ಆದರೆ ಫಲಿತಾಂಶ ಘೋಷಣೆ ಆಗಿರಲಿಲ್ಲ.
ಫಲಿತಾಂಶ ಪ್ರಕಟಿಸುವಂತೆ ಜೀವರಾಜ್ ಪರ ವಕೀಲರು ನೋಟಿಸ್ ನೀಡಿದ್ದರು. ಮಧ್ಯರಾತ್ರಿ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದೆ.
ಹಾಲಿ ಶಾಸಕರಾದ ಟಿ.ಡಿ. ರಾಜೇಗೌಡ ಅವರ ವಿರುದ್ಧ 2023ರ ಪರಾಜಿತ ಅಭ್ಯರ್ಥಿಯಾಗಿದ್ದ ಡಿ.ಎನ್. ಜೀವರಾಜ್ 255 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಮರುಎಣಿಕೆ ರೋಚಕ ಹಣಾಹಣಿಗೆ ಕಾರಣವಾಗಿತ್ತು. ಕೊನೆಗೆ ಜೀವರಾಜ್ ಮುನ್ನಡೆ ಸಾಧಿಸಿದರು.
ಫಲಿತಾಂಶ ಪ್ರಶ್ನಿಸಿ ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂತಿಮವಾಗಿ ಮೂರು ವರ್ಷಗಳ ಬಳಿಕ ಅಂಚೆ ಮತಪತ್ರಗಳ ಮರುಎಣಿಕೆ ನಡೆದು, ಕಾಂಗ್ರೆಸ್ಸಿನ ಟಿ.ಡಿ. ರಾಜೇಗೌಡ ಅವರು ಶಾಸಕತ್ವ ಕಳೆದುಕೊಂಡಿದ್ದಾರೆ.




