Monday, September 28, 2026

ತಾಯಂದಿರ ಮರಣ ಶೂನ್ಯಕ್ಕೆ ತರಲು ‘ಸುಮನ್ ರೋಡ್‍ಮ್ಯಾಪ್ 2030’ ಬಿಡುಗಡೆ

ಬೆಂಗಳೂರು: ಕರ್ನಾಟಕದಲ್ಲಿ ತಡೆಗಟ್ಟಬಹುದಾದ ತಾಯಂದಿರ ಮರಣ ಪ್ರಮಾಣ (ಎಂಎಂಆರ್) ಶೂನ್ಯಕ್ಕೆ ತರುವ ಮಹತ್ತರ ಉದ್ದೇಶದೊಂದಿಗೆ ಆರೋಗ್ಯ ಇಲಾಖೆಯು ಸುರಕ್ಷಿತ ಮಾತೃತ್ವ ಆಶ್ವಾಸನ-ಸುಮನ್ ರೋಡ್ ಮ್ಯಾಪ್-2030 ಹೊಸ ಮಾರ್ಗಸೂಚಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಬಿಡುಗಡೆ ಮಾಡಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ‘ಕಾರ್ಯ ಮತ್ತು ಫಲಿತಾಂಶದತ್ತ’ ಎಂಬ ವಿಷಯದಡಿ ನಡೆದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, 2022-24ರ ಎಸ್‍ಆರ್‍ಎಸ್ ಅಂದಾಜಿನಂತೆ ಕರ್ನಾಟಕದ ತಾಯಂದಿರ ಮರಣ ಪ್ರಮಾಣ ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ 73ರಷ್ಟಿದೆ. ಇದನ್ನು 70ಕ್ಕಿಂತ ಕಡಿಮೆಗೊಳಿಸುವುದು ರಾಜ್ಯದ ತಕ್ಷಣದ ಗುರಿಯಾಗಿದ್ದು, ದೀರ್ಘಾವಧಿಯಲ್ಲಿ ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಗರ್ಭಧಾರಣೆಗೆ ಮುನ್ನದ ಆರೈಕೆ, ರಕ್ತಹೀನತೆ ಮತ್ತು ಪೌಷ್ಟಿಕಾಂಶದ ಕೊರತೆಗಳ ನಿರ್ವಹಣೆ, ಗುಣಮಟ್ಟದ ಗರ್ಭಪೂರ್ವ ತಪಾಸಣೆ, ಹೆಚ್ಚಿನ ಅಪಾಯದ ಗರ್ಭಧಾರಣೆಯ ಗುರುತಿಸುವಿಕೆ ಹಾಗೂ ಸೂಕ್ತ ರೆಫರಲ್ ವ್ಯವಸ್ಥೆ ಕುರಿತು, ಸುರಕ್ಷಿತ ಹೆರಿಗೆ, ಪ್ರಸವೋತ್ತರ ರಕ್ತಸ್ರಾವ, ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ, ಸೆಪ್ಟಿಸ್ ಸೇರಿದಂತೆ ಪ್ರಸೂತಿ ತುರ್ತು ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ವಹಿಸುವ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು.

ತಾಯಿಯ ಮರಣದ ಮೂಲ ಕಾರಣಗಳನ್ನು ಗುರುತಿಸಿ, ಸರಿಪಡಿಸುವ ಕ್ರಮ ಕೈಗೊಂಡು, ಅನುಸರಣೆ ಮೂಲಕ ಆರೋಗ್ಯ ವ್ಯವಸ್ಥೆಯಲ್ಲಿ ಶಾಶ್ವತ ಸುಧಾರಣೆ ತರುವ ನಿಟ್ಟಿನಲ್ಲಿ ಮೆಟರ್ನಲ್ ಡೆತ್ ಸರ್ವೈಲೆನ್ಸ್ ಅಂಡ್ ರೆಸ್ಪಾನ್ಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಝೀರೋ ಮೆಟರ್ನಲ್ ಡೆತ್ ಗ್ರಾಮ್ ಪಂಚಾಯತ್ ಅಭಿಯಾನದ ಮೂಲಕ ಗರ್ಭಿಣಿಯರು, ಹೆಚ್ಚಿನ ಅಪಾಯದ ಗರ್ಭಿಣಿಯರನ್ನು ಗುರುತಿಸುವುದು, ಆರೋಗ್ಯ ಸೇವೆಗಳಿಗೆ ಸಂಪರ್ಕ ಕಲ್ಪಿಸುವುದು, ಹೆರಿಗೆ ಪೂರ್ವ ಸಿದ್ಧತೆ, ತುರ್ತು ಸಾರಿಗೆ ಹಾಗೂ ಪ್ರಸವೋತ್ತರ ಅನುಸರಣೆಯನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಿದರು.

ಕಾರ್ಯಾಗಾರದಲ್ಲಿ ಡಿಎಚ್‍ಒಗಳು, ಆರ್‍ಸಿಎಚ್‍ಒಗಳು, ವೈದ್ಯಕೀಯ ಅಧೀಕ್ಷಕರು, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಆರೋಗ್ಯಾಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರು ಭಾಗವಹಿಸಿದ್ದರು.

ಕರ್ನಾಟಕದ 7 ಪ್ರಮುಖ ಕಾರ್ಯತಂತ್ರಗಳು:

  1. ಗರ್ಭಧಾರಣೆಗೆ ಮುನ್ನದ ಆರೈಕೆ: ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ ಹಾಗೂ ಅಪಾಯಗಳನ್ನು ಗರ್ಭಧಾರಣೆಗೆ ಮುನ್ನವೇ ಪತ್ತೆ ಹಚ್ಚಿ ತಡೆಗಟ್ಟುವುದು.
  2. ಗುಣಮಟ್ಟದ ANC ಮತ್ತು ಎಚ್‍ಆರ್‍ಪಿ ಟ್ರ್ಯಾಕಿಂಗ್: ಹೆಚ್ಚಿನ ಅಪಾಯವಿರುವ ಗರ್ಭಿಣಿಯರನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು.
  3. ಗುಣಮಟ್ಟದ ಹೆರಿಗೆ ಆರೈಕೆ: ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ ಸುರಕ್ಷಿತ ಮತ್ತು ಗೌರವಯುತ ಹೆರಿಗೆ ಸೇವೆ ಖಚಿತಪಡಿಸುವುದು.
  4. ಪ್ರಸೂತಿ ತುರ್ತು ಪರಿಸ್ಥಿತಿಗಳಿಗೆ ಸನ್ನದ್ಧತೆ: ಹೆರಿಗೆಯ ಸಂದರ್ಭದಲ್ಲಿ ಉಂಟಾಗುವ ತೀವ್ರ ರಕ್ತಸ್ರಾವ (PPH) ಹಾಗೂ ಇತರ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು.
  5. ಪರಿಷ್ಕೃತ ಎಂಡಿಎಸ್‍ಆರ್ ವ್ಯವಸ್ಥೆ: ಪ್ರತಿಯೊಂದು ತಾಯಿಯ ಮರಣದ ಮೂಲ ಕಾರಣವನ್ನು ಪರಿಶೀಲಿಸಿ, ಆರೋಗ್ಯ ವ್ಯವಸ್ಥೆಯಲ್ಲಿ ಶಾಶ್ವತ ಸುಧಾರಣೆ ತರುವುದು.
  6. ‘ಶೂನ್ಯ ತಾಯಂದಿರ ಮರಣ’ ಗ್ರಾಮ ಪಂಚಾಯಿತಿ ಅಭಿಯಾನ: ಸ್ಥಳೀಯ ಆಡಳಿತ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಗರ್ಭಿಣಿಯರಿಗೆ ತುರ್ತು ಸಾರಿಗೆ ಮತ್ತು ಹೆರಿಗೆ ಪೂರ್ವ ಸಿದ್ಧತೆಗೆ ಬೆಂಬಲ ನೀಡುವುದು.
  7. ಡಿಜಿಟಲ್ ಮೇಲ್ವಿಚಾರಣೆ: ಕೇವಲ ವರದಿಗಷ್ಟೇ ಸೀಮಿತವಾಗದೆ, ದತ್ತಾಂಶಗಳನ್ನು ಬಳಸಿಕೊಂಡು ಸಮಯೋಚಿತ ನಿರ್ಧಾರ ಹಾಗೂ ಕ್ರಮ ಕೈಗೊಳ್ಳುವುದು.

More like this
Related

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ : ಎಂಡಿಎಂಎ ಸಹಿತ ಮೂವರು ಆರೋಪಿಗಳ ಸೆರೆ, 24 ಲಕ್ಷ ರೂ. ಮೌಲ್ಯದ ಮಾದಕವಸ್ತು ವಶ

ಮಂಗಳೂರು : ನಗರದಲ್ಲಿ ನಿಷೇಧಿತ ಮಾದಕವಸ್ತು ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಮೂವರು...

ಕೊಡವೂರು ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

ಉಡುಪಿ: ಜನವರಿ 20, 2027 ಮಹಾತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ, ಕೊಡವೂರಿನ...

ಬಾಲ್ಕನಿ ತಡೆಗೋಡೆ ಕುಸಿದು ವಿದ್ಯಾರ್ಥಿ ಮೃತ್ಯು: ಸಂಘಟಕ, ಕಟ್ಟಡ ಮಾಲೀಕನ ವಿರುದ್ಧ ಪ್ರಕರಣ

ಮಂಗಳೂರು: ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಶನ್ ಹಾಲ್‌ನ ಮೊದಲ ಮಹಡಿಯ...

ಮಂಗಳೂರು: ಬಾಲ್ಕನಿ ಕುಸಿದು ಬಿದ್ದು ಓರ್ವ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯ, ನಾಲ್ವರಿಗೆ ಗಾಯ

ಮಂಗಳೂರು: ಮಂಗಳೂರಿನ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್‌ನ ಬಾಲ್ಕನಿ ಕುಸಿದು...

Copying is disabled on Udupi Digital News.