ಬೆಂಗಳೂರು: ನಟ ಕಿಚ್ಚ ಸುದೀಪ್ ವಿರುದ್ಧ ಮಾಜಿ ಸಂಸದ ವಿಎಸ್ ಉಗ್ರಪ್ಪ ನೀಡಿರುವ ಹೇಳಿಕೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸುದೀಪ್ ಅವರು ನಾಯಕ ಸಮುದಾಯದ ಪರವಾಗಿ ಧ್ವನಿ ಎತ್ತಬೇಕು ಮತ್ತು ಸಮುದಾಯದ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಉಗ್ರಪ್ಪ ಕರೆ ನೀಡಿದ್ದು, ಈ ಹೇಳಿಕೆಗೆ ಮಾಜಿ ಸಚಿವ ಎಸ್.ಜಿ. ರಾಜುಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಮದಕರಿ ನಾಯಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಗ್ರಪ್ಪ, ನಾಯಕ ಸಮುದಾಯದ ಭಾಗವಾಗಿರುವ ಸುದೀಪ್ ಅವರು ಸಮುದಾಯದ ಹಿತಕ್ಕಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದರು. ಈ ಹೇಳಿಕೆ ಸುದೀಪ್ ಅವರಿಗೆ ಅವಮಾನ ಮಾಡಿದಂತಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಉಗ್ರಪ್ಪ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸುದೀಪ್ ಅವರು ನಾಯಕ ಸಮುದಾಯದ ಹೆಸರಿನಿಂದ ಗುರುತಿಸಿಕೊಂಡವರು. ನಾಯಕ ಸಮಾಜದ ಜಯಂತಿಯಲ್ಲಿ ಸುದೀಪ್ ಅವರನ್ನು ಮೊದಲು ಪರಿಚಯಿಸಿದ್ದೇ ನಾನು. ತಾನು ವಕೀಲನಾಗಿದ್ದು, ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲೆ ಎಂದು ಹೇಳಿದರು. ಕನ್ನಡ ನಾಡಿನ ಹೋರಾಟದಲ್ಲಿ ಕಲಾವಿದರ ಪಾತ್ರವನ್ನು ಉಲ್ಲೇಖಿಸಿದ ಅವರು, ಗೋಕಾಕ್ ಚಳವಳಿಗಾಗಿ ಡಾ. ರಾಜ್ಕುಮಾರ್ ಕೂಡ ಬೀದಿಗಿಳಿದು ಹೋರಾಟ ನಡೆಸಿದ್ದರು ಎಂದು ನೆನಪಿಸಿದರು.
ರಾಜುಗೌಡ ಹಾಗೂ ಸುದೀಪ್ ಅವರನ್ನು ಉದ್ದೇಶಿಸಿ ಮಾತನಾಡಿದ ಉಗ್ರಪ್ಪ, ಸಮಾಜದ ಹಿತಕ್ಕಾಗಿ ಒಟ್ಟಾಗಿ ಹೋರಾಡೋಣ. ಸುದೀಪ್ ಅವರೇ, ನಿಮ್ಮ ನಾಯಕತ್ವದಲ್ಲೇ ಹೋರಾಟ ನಡೆಸಲು ಸಿದ್ಧರಿದ್ದೇವೆ. ಸಮಾಜದ ಬೆಂಬಲಕ್ಕೆ ನಿಲ್ಲುವುದು ಅಗತ್ಯ. ಸಮಾಜ ನಿಮ್ಮ ಬೆಂಬಲಕ್ಕೆ ನಿಂತಿದ್ದನ್ನೂ ಮರೆಯಬಾರದು ಎಂದು ಹೇಳಿದರು.
ಸಮುದಾಯದ ಹಕ್ಕುಗಳ ಪ್ರಶ್ನೆ ಬಂದಾಗ ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಹೋರಾಟಕ್ಕೆ ಬರಬೇಕು. ಮೀಸಲಾತಿ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಂಡಾಗ ನಮ್ಮ ಆಕ್ರೋಶ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟವರಿಗೆ ತಲುಪಲಿದೆ ಎಂದು ಅಭಿಪ್ರಾಯಪಟ್ಟರು.
ಮೀಸಲಾತಿ ಹೆಚ್ಚಳಕ್ಕೆ ಕಾನೂನು ಮಾನ್ಯತೆ ನೀಡಲು ಆಗ್ರಹ:
ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ತಡೆ ನೀಡಿರುವ ಹೈಕೋರ್ಟ್ನ ನಿರ್ಧಾರವು ಸಂಬಂಧಪಟ್ಟ ಸಮುದಾಯಗಳಿಗೆ ದೊಡ್ಡ ಹೊಡೆತವಾಗಿದೆ ಎಂದು ಉಗ್ರಪ್ಪ ಹೇಳಿದರು. ಈ ತೀರ್ಪು ಸಂವಿಧಾನದ ಆಶಯ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಅವಕಾಶವಿದೆ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಮತ್ತು ಸುಭಾಷ್ ಆದಿ ಅವರಿದ್ದ ಸಮಿತಿ ವರದಿ ನೀಡಿತ್ತು. ಈ ವರದಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವೀಕರಿಸಿದ್ದರು ಎಂದು ಉಲ್ಲೇಖಿಸಿದ ಉಗ್ರಪ್ಪ, ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ಜಾರಿಯಲ್ಲಿರುವ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮೀಸಲಾತಿ ಹೆಚ್ಚಳಕ್ಕೆ ಕಾನೂನು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ ಒಂಬತ್ತನೇ ಅನುಸೂಚಿಯ ರಕ್ಷಣೆ ಒದಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು ಎಂದು ಅವರು ಹೇಳಿದರು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಇನ್ನೂ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜಕೀಯ ಕಾರಣಗಳಿಗಾಗಿ ವಿಷಯವನ್ನು ವಿಳಂಬ ಮಾಡಬಾರದು ಎಂದರು. ಬಿಜೆಪಿ ನಾಯಕರು ಪ್ರಧಾನಮಂತ್ರಿ ಅವರ ಮೇಲೆ ಒತ್ತಡ ತಂದು ಮೀಸಲಾತಿ ಹೆಚ್ಚಳಕ್ಕೆ ಕಾನೂನು ಮಾನ್ಯತೆ ದೊರಕಿಸಿಕೊಡಬೇಕು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಸಿದ್ಧರಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಅವಕಾಶ ಮಾಡಿಕೊಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
ಉಗ್ರಪ್ಪ ವಿರುದ್ಧ ರಾಜುಗೌಡ ಆಕ್ರೋಶ:
ಉಗ್ರಪ್ಪ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಎಸ್.ಜಿ. ರಾಜುಗೌಡ, ಸುದೀಪ್ ಅವರನ್ನು ಏಕವಚನದಲ್ಲಿ ಸಂಬೋಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರಪ್ಪ ಅವರು ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ಸುದೀಪ್ ಅವರಂತಹ ಕಲಾವಿದರ ಬಗ್ಗೆ ಗೌರವದಿಂದ ಮಾತನಾಡುವುದು ಅಗತ್ಯ ಎಂದು ಹೇಳಿದರು.
ಯಾವುದೇ ಗಾಡ್ಫಾದರ್ ಇಲ್ಲದೆ, ತಮ್ಮ ಪರಿಶ್ರಮದಿಂದ 33 ವರ್ಷಗಳಿಂದ ಚಿತ್ರರಂಗದಲ್ಲಿ ಬೆಳೆದು ನಿಂತಿರುವ ಸುದೀಪ್ ದೊಡ್ಡ ಕಲಾವಿದರಾಗಿದ್ದಾರೆ. ಅವರನ್ನು ಏಕವಚನದಲ್ಲಿ ನಿಂದಿಸುವುದು ಸರಿಯಲ್ಲ ಎಂದು ರಾಜುಗೌಡ ಅಭಿಪ್ರಾಯಪಟ್ಟರು. ಮದಕರಿ ನಾಯಕ ಜಯಂತಿಗೆ ಸುದೀಪ್ ಆಗಮಿಸಿದ್ದು ತಪ್ಪೇ ಎಂದು ಪ್ರಶ್ನಿಸಿದ ಅವರು, ಕಾರ್ಯಕ್ರಮದಲ್ಲಿ ಜನರು ಸುದೀಪ್ ಅವರ ಹೆಸರನ್ನು ಕೂಗಿ ಸಂಭ್ರಮಿಸಿದರೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದೇಕೆ ಎಂದು ಕೇಳಿದರು. ಕಲಾವಿದರಿಗೆ ಜಾತಿಯ ಮಿತಿಯನ್ನು ವಿಧಿಸಬಾರದು. ಸುದೀಪ್ ಕೇವಲ ನಟರಲ್ಲ, ಅವರು ಸಮಾಜದ ಆಸ್ತಿ ಎಂದು ಹೇಳಿದ ರಾಜುಗೌಡ, ಉಗ್ರಪ್ಪ ಅವರು ತಕ್ಷಣ ಸುದೀಪ್ ಅವರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಉಗ್ರಪ್ಪ ಅವರ ಸಮುದಾಯದ ಹೋರಾಟದ ಕರೆಗೆ ರಾಜುಗೌಡ ವ್ಯಕ್ತಪಡಿಸಿರುವ ವಿರೋಧದ ಹಿನ್ನೆಲೆಯಲ್ಲಿ, ನಟ ಸುದೀಪ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಆರಂಭವಾದ ಈ ಚರ್ಚೆ ಇದೀಗ ಸಮುದಾಯದ ಹಕ್ಕುಗಳು, ಕಲಾವಿದರ ಸಾಮಾಜಿಕ ಪಾತ್ರ ಮತ್ತು ಮೀಸಲಾತಿ ಹೆಚ್ಚಳದ ವಿಚಾರಗಳತ್ತಲೂ ಗಮನ ಸೆಳೆದಿದೆ.
ಸುದೀಪ್ ವಿರುದ್ಧ ಉಗ್ರಪ್ಪ ವಾಗ್ದಾಳಿ: ಕ್ಷಮೆ ಕೇಳುವಂತೆ ರಾಜುಗೌಡ ಆಗ್ರಹ




