ಯುಡಿ ನ್ಯೂಸ್ ಡಾಟ್ ಕಾಮ್
ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.
ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ತೀರ್ಪು ನೀಡಿದ್ದು, ವಿನಯ್ ಸೇರಿದಂತೆ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.
ವಿನಯ್ ಕುಲಕರ್ಣಿ ಮತ್ತು ಇತರರಿಗೆ ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಸೇರಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಿದ್ದಾರೆ. ಇದೇ ವೇಳೆ ಯೋಗೇಶ್ ಗೌಡ ಮಕ್ಕಳಿಗೆ ಪರಿಹಾರವಾಗಿ 16 ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಸೂಚಿಸಿದೆ. ವಿನಯ್ ಕುಲಕರ್ಣಿ ಕಳೆದ 3 ದಿನದಿಂದ ಒಂದೇ ಬಟ್ಟೆಯಲ್ಲಿದ್ದಾರೆ. ಬಟ್ಟೆ ಬದಲಿಸಲು ಅನುಮತಿ ನೀಡುವಂತೆ ಶಾಸಕರ ಪರ ವಕೀಲ ಸುನಿಲ್ ಮನವಿ ಮಾಡಿದ್ದರು. ಅಪರಾಧಿಗಳಿಗೆ ಬಟ್ಟೆ ಒದಗಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೈಲು ಕೈಪಿಡಿಯಲ್ಲಿರುವಂತೆ ಬಟ್ಟೆ ಒದಗಿಸಲು ಜಡ್ಜ್ ಸೂಚನೆ ನೀಡಿದ್ದಾರೆ. ಇದರ ಜತೆಗೆ ಪ್ರತಿ ಸೆಕ್ಷನ್‌ಗೂ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ.
2016ರ ಜೂನ್ 15ರಂದು ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು ಸಪ್ತಾಪುರ ಬಡಾವಣೆಯ ಜಿಮ್ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡದ ಉಪನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದರು. ಆಸ್ತಿ ವಿವಾದದ ವಿಚಾರಕ್ಕಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಹತ್ಯೆಯಾದ ಯೋಗೇಶ್ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಬಳಿಕ ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂದು ಹೇಳಿತ್ತು. ಅಲ್ಲಿಂದ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.
ಈ ಕೊಲೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಕೈವಾಡವಿರುವ ಅನುಮಾನ ವ್ಯಕ್ತವಾಗಿತ್ತು. 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು, ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇದರ ನಂತರ ವಿನಯ್ ಕುಲಕರ್ಣಿ ಜಾಮೀನು ಪಡೆದು ಹೊರಗೆ ಬಂದಿದ್ದರು. ನಂತರದಲ್ಲಿ ಈ ಪ್ರಕರಣವನ್ನು ಜನಪ್ರತಿನಿಧಿ ಕೋರ್ಟ್ಗೆ ನೀಡಲಾಗಿತ್ತು. ಇದೀಗ ಈ ಅವರಿಗೆ ಶಿಕ್ಷೆಯನ್ನು ಘೋಷಣೆ ಮಾಡಿದೆ.




