ಮೂಡಾಡಿ ಮುತ್ತು ದೇವಾಡಿಗ. ಮೂಡಾಡಿ ಕುಟುಂಬದ ಹಿರಿಯ ಜೀವ. ಆರು ಹೆಣ್ಣು ಮಕ್ಕಳ ಮಹಾತಾಯಿ. ಹನ್ನೊಂದು ಮೊಮ್ಮಕ್ಕಳ ಅಜ್ಜಿ. ಐದು ಮರಿಮಕ್ಕಳ ಪಿಜ್ಜಿ. ಪತಿಯನ್ನು ಕಳೆದುಕೊಂಡರೂ ಯಾರ ಮುಂದೆಯೂ ಕೈಚಾಚದೆ, ಸ್ವಾಭಿಮಾನದ ಬದುಕು ಸವೆಸಿದ ಹೆಣ್ಣು. ಅಸ್ತಮಾ ಕಾಯಿಲೆಯೊಂದಿಗೆ ಹೋರಾಡಿ, 83ರ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಹೊರಟುಹೋದಳು ನನ್ನ ಅಬ್ಬಿ.
ಬಾಲ್ಯದಿಂದಲೂ ನಾನು ಬೆಳೆದದ್ದು ಅಬ್ಬಿಯ ಆಶ್ರಯದಲ್ಲೇ. ಹೀಗಾಗಿ ಅಬ್ಬಿ ಎಂದರೆ ನನಗೆ ಮುಷ್ಠಿಯಷ್ಟು ಪ್ರೀತಿ ಹೆಚ್ಚು. ನಾನಂಥಲ್ಲ, ಎಲ್ಲಾ ಮೊಮ್ಮಕ್ಕಳೆಂದರೆ ಅವಳಿಗೆ ತನ್ನ ಮಕ್ಕಳಿಗಿಂತ ಜಾಸ್ತಿ ಪ್ರೀತಿ. ನನಗೆ ಸಣ್ಣದೊಂದು ತೊಂದರೆಯಾದರೂ ಸಾಕು. ಇಡೀ ದಿನ ಅದನ್ನೇ ನೆನಪಿಸಿಕೊಂಡು ಮರುಗುತ್ತಾ ಕೂರುತ್ತಿದ್ದಳು. ನಾನು ಚೆನ್ನಾಗಿದ್ದೇನಾ ಎಂದು ಕೇಳಿ ಖಚಿತಪಡಿಸಿಕೊಳ್ಳುವವರೆಗೆ ಅವಳ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ನನಗೇನಾದರೂ ಆದರೆ ಹಲವು ಹರಕೆಗಳನ್ನು ಕಟ್ಟಿಕೊಳ್ಳುತ್ತಿದ್ದಳು. ಮತ್ತು ಆ ಹರಕೆಯನ್ನು ತೀರಿಸಲು ದುಂಬಾಲು ಬೀಳುತ್ತಿದ್ದಳು.

ಅರವತ್ತು ವರ್ಷ ದಾಟಿದ ವಯಸ್ಸಿನಲ್ಲೂ ಹೆಗಲ ಮೇಲೆ ಹಾರೆ, ಪಿಕಾಸು ಇಟ್ಟು ಉದ್ಯೋಗ ಖಾತರಿ ಕೆಲಸಕ್ಕೆ ಹೋಗಿ ತನ್ನ ಖರ್ಚಿಗೆ ಬೇಕಾದ ಹಣವನ್ನು ತಾನೇ ದುಡಿದು ಸಂಪಾದಿಸುತ್ತಿದ್ದಳು. ಅಸ್ತಮಾ ಕಾಯಿಲೆ ಇದ್ದರೂ ಕೆಲಸ ಮಾಡುವ ಛಲ, ಕಷ್ಟ ಬಂದರೂ ಕುಗ್ಗದ ಸ್ವಾಭಿಮಾನ. ಅಬ್ಬಿ ಹಾಗೆಯೇ ಬದುಕಿದಳು. ಬದುಕಿ ತೀರಿದಳು.
ಬಾಲ್ಯದಿಂದಲೂ ಅವಳೊಂದಿಗೆ ಹೆಚ್ಚು ಒಡನಾಟವಿದ್ದ ಕಾರಣಕ್ಕೋ ಏನೋ. ಅಬ್ಬಿಗೆ ನಾನೆಂದರೆ ತುಸು ಹೆಚ್ಚೇ ಪ್ರೀತಿ. ನನಗೂ ಅವಳೆಂದರೆ ಜೀವ. “ನಿನ್ನ ಮದುವೆ ನೋಡಿಕೊಂಡೇ ಸಾಯಬೇಕು ಮಗನೆ… ನಾನು ಸಾಯೋ ಒಳಗೆ ಮದುವೆಯಾಗು.” ಎಂದು ಅಬ್ಬಿ ಹುಷಾರು ತಪ್ಪಿದಾಗೆಲ್ಲಾ ಆಗಾಗ್ಗೆ ಹೇಳುತ್ತಿದ್ದಳು. ಸಂಪ್ರದಾಯ, ಆಚಾರ-ವಿಚಾರಗಳ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಅಬ್ಬಿಗೆ ನಾನು ಮದುವೆಯಾಗಲು ಹೊರಟಿದ್ದ ಹುಡುಗಿ ಅಂತರ್ ಧರ್ಮದವಳು ಎಂಬುದನ್ನು ಹೇಳಲು ನನಗೆ ಧೈರ್ಯವಾಗಿರಲಿಲ್ಲ. ಕೊನೆಗೆ ಮನೆಯವರ ಮೂಲಕ ಆಕೆಗೆ ವಿಷಯ ಗೊತ್ತಾಯಿತು. ಅಬ್ಬಿ ನನ್ನನ್ನು ಕರೆದು ಹೇಳಿದ ಮಾತುಗಳು ಇಂದಿಗೂ ಕಿವಿಯಲ್ಲಿ ಹಾಗೆಯೇ ಇವೆ.
“ಅಪ್ಪಿಯನ್ನು ಮದುವೆಯಾಗು ಮಗನೆ. ನನ್ನ ಅಭ್ಯಂತರವಿಲ್ಲ. ಇದೆಲ್ಲ ಈಗ ಮಾಮೂಲಿಯಾಗಿದೆ. ಆಕೆಯನ್ನು ನಾನು ಚೆನ್ನಾಗಿ ಅರಿತಿದ್ದೇನೆ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಸಾಲ ಇದೆ ಅಂತ ಮದುವೆ ಮುಂದೂಡಬೇಡ. ಸಾಲ ಹೇಗೂ ತೀರುತ್ತೆ.” ಎಂದು. ಆ ಕ್ಷಣ ನಾನು ನಿಜಕ್ಕೂ ನಿಬ್ಬೆರಗಾಗಿ ಹೋಗಿದ್ದೆ. ನನ್ನ ಬಹುಕಾಲದ ಸ್ನೇಹಿತೆ, ವಕೀಲೆ ಆಫ್ರೀನ್ ಅವಳನ್ನು ಮದುವೆಯಾಗಲು ಅಬ್ಬಿಯ ಆಶೀರ್ವಾದವೇ ನನಗೆ ದೊಡ್ಡ ಧೈರ್ಯವಾಯಿತು.
ಹಾಸಿಗೆಯಲ್ಲಿ ಇರುತ್ತಿದ್ದ ಅಬ್ಬಿಗೆ “ನೀನು ಹಾಸಿಗೆಯಲ್ಲೇ ಮಲಗಿದ್ದರೆ ಮದುವೆ ಹಾಲ್‌ಗೆ ನಿನ್ನನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದೆ. ಮದುವೆಗೆ ಒಂದು ವಾರ ಬಾಕಿಯಿದ್ದಾಗಲೂ ಹಾಸಿಗೆಯಿಂದ ಕದಲದಿದ್ದ ಅಬ್ಬಿ, ಕೋಲು ಊರಿಕೊಂಡು ಮನೆಯ ಪಡಸಾಲೆಗೆ ಬಂದು ಕೂರಲು ಆರಂಭಿಸಿದಳು. ಮನೆಗೆ ತಂದ ಮದುವೆಯ ಬಟ್ಟೆಗಳನ್ನು ಅಕ್ಕಪಕ್ಕದವರಿಗೆ ತಾನೇ ತೋರಿಸಿ ಸಂತೋಷಪಟ್ಟಳು. ನನ್ನ ಮೆಹಂದಿ ಕಾರ್ಯಕ್ರಮದ ದಿನ ಕೊನೆಯ ಬಾರಿಗೆ ಡಿಜೆ ಹಾಡಿಗೆ ನನ್ನ ಜೊತೆ ಕುಣಿದು ಕುಪ್ಪಳಿಸಿ ತಬ್ಬಿಕೊಂಡು ನನಗೆ ಮುತ್ತಿಕ್ಕಿದ್ದಳು. ಮದುವೆಯ ದಿನ ಹಾಲ್‌ಗೆ ಬಂದು ನಮ್ಮಿಬ್ಬರನ್ನೂ ಆಶೀರ್ವದಿಸಿದಳು. ಬಹುಶಃ ನನ್ನ ಮದುವೆಯನ್ನು ನೋಡಬೇಕು ಎಂಬ ಅವಳ ಕೊನೆಯ ಆಸೆಯೇ ಅವಳಿಗೆ ಆ ದಿನಗಳಷ್ಟು ಶಕ್ತಿ ಕೊಟ್ಟಿರಬೇಕು.
ಮದುವೆಯಾದ ಮರುದಿನವೇ ಅಸ್ತಮಾ ಮತ್ತೆ ಜಾಸ್ತಿಯಾಯಿತು. ಮದುವೆಯಾದ ಮೂರೇ ದಿನಕ್ಕೆ ಅಬ್ಬಿಯನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಿದೆವು. ಸೋಡಿಯಂ ಅಂಶ ಕಡಿಮೆಯಾಗಿ ಪ್ರಜ್ಞಾಹೀನಳಾಗಿದ್ದ ಅಬ್ಬಿಯನ್ನು ಅವಳಿಗೆ ಖಾಯಂ ಚಿಕಿತ್ಸೆ ನೀಡುತ್ತಿದ್ದ ಡಾ. ಆದರ್ಶ ಹೆಬ್ಬಾರ್ ಅವರು ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಿದರು. ಒಂದು ವಾರ ನಾನು, ನನ್ನ ಹೆಂಡತಿ, ಚಿಕ್ಕಮ್ಮ ಅಬ್ಬಿಯ ಸುತ್ತಲೂ ಇದ್ದೆವು. ಎರಡು-ಮೂರು ದಿನಗಳಲ್ಲಿ ಚೇತರಿಸಿಕೊಂಡ ಅಬ್ಬಿ ಮತ್ತೆ ತನ್ನ ಹಳೆಯ ಅಬ್ಬಿಯಾಗಿಬಿಟ್ಟಳು. “ಹೊಸ ಮದುಮಕ್ಕಳು ನೀವು. ಆಸ್ಪತ್ರೆಯಲ್ಲೇನು ಮಾಡ್ತಿದ್ದೀರಿ? ಹನಿಮೂನ್‌ಗೆ ಹೋಗಿ.” ಎಂದು ನಮ್ಮನ್ನೇ ಗದರಿಸುತ್ತಿದ್ದಳು. ಆ ಮಾತು ಕೇಳಿ ನಗುತ್ತಿದ್ದೆವು. ಆದರೆ ಇಂದು ನೆನಪಿಸಿಕೊಂಡರೆ ಅವಳ ಆ ಗದರಿಕೆಯೂ ನೆನಪಾಗಿ ಕಣ್ಣೀರು ಬರುತ್ತಿದೆ. ವಾರದ ಬಳಿಕ ಅಬ್ಬಿಯನ್ನು ಮನೆಗೆ ಕರೆದುಕೊಂಡು ಬಂದೆವು. ಆ ಬಳಿಕ ಮತ್ತೆ ಆಸ್ಪತ್ರೆಗೆ ಅವಳು ದಾಖಲಾಗಲಿಲ್ಲ.
ಒಂದು ವರ್ಷ ಎರಡು ತಿಂಗಳು. ಹಾಸಿಗೆಯಲ್ಲೇ ಇದ್ದರೂ ನಮ್ಮೊಂದಿಗೆ ಮಾತನಾಡುತ್ತಾ, ನಗುತ್ತಾ, ತನ್ನದೇ ರೀತಿಯಲ್ಲಿ ಬದುಕುತ್ತಿದ್ದಳು. ಕಳೆದ ಹದಿನೈದು ದಿನಗಳ ಹಿಂದೆ ಬಂದ ಕೆಮ್ಮು ಮಾತ್ರ ಎಲ್ಲವನ್ನೂ ಬದಲಿಸಿಬಿಟ್ಟಿತು. ಕಫ ಬ್ಲಾಕ್ ಆಗಿ ಇನ್ಫೆಕ್ಷನ್ ಆಯಿತು. ಏನೇ ಆದರೂ ಈ ಬಾರಿ ಆಸ್ಪತ್ರೆಗೆ ಬರಲ್ಲ ಎಂದು ಅಬ್ಬಿ ಪಟ್ಟು ಹಿಡಿದಳು. ಮನೆಗೇ ನಮ್ಮೂರ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದೆವು. ಸಾಯುವ ಹಿಂದಿನ ದಿನ ಕೈಕಾಲುಗಳ ಚಲನೆಯೂ ನಿಂತು ಹೋಗಿತ್ತು. ಉಸಿರಾಟ ಮಾತ್ರ ಇತ್ತು. ಎಲ್ಲರೂ ಬಂದು ಬಾಯಿಗೆ ನೀರು ಹಾಕಿದರು. ದಿನವಿಡೀ ಒಂದೇ ಒಂದು ಮಾತೂ ಆಡದ ಅಬ್ಬಿ, ರಾತ್ರಿ 10.30ಕ್ಕೆ ಎದ್ದು ಕೂರಿಸಿದಾಗ ಮತ್ತೆ ಮಾತನಾಡಲು ಆರಂಭಿಸಿದಳು. ಮಾರನೇ ದಿನ ಚೌತಿ. ಬೆಳಗ್ಗೆ ಗಣಪತಿ ತರಲು ನಾನು, ಅಣ್ಣ ಹೋಗಬೇಕು. ನೀನು ಬೇಗ ಹುಷಾರ್ ಆಗು. ನೀನು ಹುಷಾರ್ ಆದರೆ ಮಾತ್ರ ನಮಗೆ ಹೋಗಲು ಸಾಧ್ಯ ಎಂದೆ. ಅಬ್ಬಿ ಮೆಲು ದನಿಯಲ್ಲಿ ಮಂಗಳಾರತಿ ಕೊಟ್ಟು ಬಾ ಎಂದಳು. ಅದೇ ಅಬ್ಬಿ ನನ್ನೊಂದಿಗೆ ಆಡಿದ ಕೊನೆಯ ಮಾತು. ಚೌತಿಯ ದಿನ ಬೆಳಿಗ್ಗೆ ತಿಂಡಿ ತಿಂದು, ಮಾತನಾಡಿ ಮಲಗಿದ ಅಬ್ಬಿ ಆ ಬಳಿಕ ಮತ್ತೆ ಮಾತನಾಡಲಿಲ್ಲ. ಕೊನೆಗೆ ಏದುಸಿರು ಬಿಟ್ಟು ನಮ್ಮನ್ನು ಬಿಟ್ಟು ಹೊರಟುಹೋದಳು.
ಅಜ್ಜಿ ಮನೆಗೆ ಹೋದಾಗಲೆಲ್ಲ ಅಬ್ಬಿಯ ಜೊತೆ ಅದೇ ಹಾಸಿಗೆಯಲ್ಲಿ ಮಲಗುತ್ತಿದ್ದೆ. ಅವಳನ್ನು ತಬ್ಬಿಕೊಂಡೇ ನಿದ್ದೆ ಮಾಡುತ್ತಿದ್ದೆ. ಈಗ ಅದೇ ಕೋಣೆಗೆ ಹೋದರೆ ಹಾಸಿಗೆ ಇದೆ, ದಿಂಬು ಇದೆ ಆದರೆ ಅಬ್ಬಿ ಮಾತ್ರ ಇಲ್ಲ. ಎಲ್ಲವೂ ಇದ್ದೂ ಏನೂ ಇಲ್ಲದಂತಾಗಿದೆ. ನನ್ನ ಮೇಲೆ ಹಲ್ಲೆ ನಡೆದ ದಿನವೂ ಅಬ್ಬಿ ಇಡೀ ದಿನ ನಾನು ಮನೆಗೆ ಬರುವುದನ್ನೇ ಕಾಯುತ್ತಾ ಕುಳಿತಿದ್ದಳು. ನನ್ನ ನೋವು ಅವಳ ನೋವಾಗಿತ್ತು. ನನ್ನ ಸಂತೋಷ ಅವಳ ಸಂಭ್ರಮವಾಗಿತ್ತು. ನನ್ನ ಮದುವೆ ಅವಳ ಆಸೆಯಾಗಿತ್ತು. ಮೂರು ವರ್ಷಗಳಿಂದ ಹಾಸಿಗೆಯಲ್ಲೇ ಕಾಲ ಕಳೆಯುತ್ತಿದ್ದ ಅಬ್ಬಿ, ಆ ಹಾಸಿಗೆಯಿಂದ ಎದ್ದು ಹೊರಗೆ ಬಂದದ್ದು ನನ್ನ ಮೆಹಂದಿ ಮತ್ತು ಮದುವೆ ಕಾರ್ಯಕ್ರಮಗಳಿಗೆ ಮಾತ್ರ. ಅದಕ್ಕೂ ಮೊದಲು ನಮ್ಮ ಕುಟುಂಬ ತಿರುಪತಿ ಯಾತ್ರೆಗೆ ಹೋದಾಗ ನಮ್ಮೊಂದಿಗೆ ಬಂದಿದ್ದಳು. ಅಷ್ಟೇ… ಅಬ್ಬಿಯ ಕೊನೆಯ ಪ್ರಯಾಣಗಳು ಅವು.
ಹತ್ತು ವರ್ಷಗಳಿಂದ ಅನಾರೋಗ್ಯ ಕಾಡಿದರೂ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಿದ್ದ ಅಬ್ಬಿ, ಕಳೆದ ಮೂರು ವರ್ಷಗಳಿಂದ ಎಲ್ಲವನ್ನೂ ಆ ಒಂದು ಕೋಣೆಯಲ್ಲೇ ಕಳೆಯಬೇಕಾಯಿತು. ಆದರೂ ಇಷ್ಟು ವರ್ಷ ನಮ್ಮೊಂದಿಗೆ ಇದ್ದದ್ದು ಅವಳ ಇಚ್ಛಾಶಕ್ತಿಯಿಂದ ಮಾತ್ರವಲ್ಲ. ಅವಳನ್ನು ಅತ್ಯಂತ ಜತನದಿಂದ ನೋಡಿಕೊಂಡ ನನ್ನ ಚಿಕ್ಕಮ್ಮಂದಿರು. ತಮ್ಮ ಬದುಕಿನ ಬಹುಭಾಗವನ್ನೇ ಅಬ್ಬಿಯ ಆರೈಕೆಗೆ ಮೀಸಲಿಟ್ಟರು. ಅಬ್ಬಿಯನ್ನು ಮಗುವಂತೆ ಸಲಹಿದರು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಇಬ್ಬರು ತಂಗಿಯರು ಅಬ್ಬಿಯ ಎಲ್ಲಾ ಚಾಕರಿಯನ್ನು ಮಾಡಿದರು. ಅದರಲ್ಲೂ ಬಹುಪಾಲು ನನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಅಬ್ಬಿಗೆ ಯಾವುದರಲ್ಲೂ ಕಿಂಚಿತ್ ಕಡಿಮೆಯಾಗದಂತೆ ನೋಡಿಕೊಂಡರು. ಇವರೆಲ್ಲರ ಸೇವೆ, ಪ್ರೀತಿ ಮತ್ತು ತ್ಯಾಗಕ್ಕೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ.
ಅಬ್ಬಿಯನ್ನು ಕಳೆದುಕೊಂಡ ನೋವನ್ನು ಹೇಗೆ ಹೇಳಲಿ? ನನ್ನ ಬಾಲ್ಯದ ಆಶ್ರಯ ಅವಳು. ನನ್ನ ಕಷ್ಟದ ದಿನಗಳ ಮಮತೆ ಅವಳು. ನನ್ನ ಮದುವೆಯ ಕನಸು ಕಂಡ ಹಿರಿಯ ಜೀವ ಅವಳು. ನನ್ನ ಹೆಂಡತಿಯನ್ನು ನನ್ನಷ್ಟೇ ನಂಬಿ, ಅವಳು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಹೇಳಿದ ಮನಸ್ಸು ಅವಳು. ನನ್ನ ಜೊತೆ ಕೊನೆಯದಾಗಿ ಕುಣಿದವಳು ಅವಳು.
ಅಬ್ಬಿ ನನ್ನ ಬದುಕಿನಿಂದ ಹೋಗಿಲ್ಲ. ಅವಳು ನನ್ನ ಬಾಲ್ಯದ ನೆನಪುಗಳಲ್ಲಿ, ನನ್ನ ಮದುವೆಯ ಚಿತ್ರಗಳಲ್ಲಿ, ಅಜ್ಜಿ ಮನೆಯ ಆ ಹಾಸಿಗೆಯಲ್ಲಿ, ನನ್ನ ಪ್ರತಿಯೊಂದು ನೋವಿನಲ್ಲೂ, ನನ್ನ ಪ್ರತಿಯೊಂದು ಸಂತೋಷದಲ್ಲೂ ಅವಳು ಹಾಗೆಯೇ ಉಳಿದು ಬಿಟ್ಟಳು!
ಆದರೆ ಅಬ್ಬಿಯ ಕೋಣೆಗೆ ಹೋದಾಗ ಅವಳನ್ನು ತಬ್ಬಿಕೊಳ್ಳಲು ಸಾಧ್ಯವಾಗದ ಖಾಲಿತನವನ್ನು ಮಾತ್ರ ನನ್ನ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ನನ್ನನ್ನು ಕಾಯುತ್ತಿದ್ದ ಆ ಕಣ್ಣುಗಳು ಇನ್ನು ಬಾಗಿಲಿನತ್ತ ನೋಡುವುದಿಲ್ಲ. ನನ್ನ ಬರುವಿಕೆಗೆ ಮರುಗುತ್ತಿದ್ದ ಆ ಹೃದಯ ಇನ್ನು ಬಡಿದಾಡುವುದಿಲ್ಲ. ನನ್ನನ್ನು “ಮಗನೆ” ಎಂದು ಕರೆಯುತ್ತಿದ್ದ ಆ ಧ್ವನಿ ಇನ್ನು ಕೇಳುವುದಿಲ್ಲ.
ಅಬ್ಬಿಯ ಮೊಮ್ಮಗನಾಗಿ ಹುಟ್ಟಿದ್ದು ನನ್ನ ಬದುಕಿನ ದೊಡ್ಡ ಭಾಗ್ಯ. ಅವಳನ್ನು ತಬ್ಬಿಕೊಂಡು ಬೆಳೆದದ್ದು ನನ್ನ ಬದುಕಿನ ಅತೀ ಸುಂದರ ನೆನಪು. ಅವಳನ್ನು ಕಳೆದುಕೊಂಡದ್ದು ನನ್ನ ಬದುಕಿನ ತುಂಬಲಾಗದ ಖಾಲಿತನ. ಮಗನೆಂದು ಕರೆಸಿಕೊಂಡ ಈ ಮೊಮ್ಮಗನ ಹೃದಯದಲ್ಲಿ ನೆಮ್ಮದಿಯಾಗಿ ಅವಳು ಮಲಗುತ್ತಾಳೆ. ಅವಳ ಜಾಗವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಮಿಸ್ ಯೂ ಅಬಾ.. ಮತ್ತೆ ಹುಟ್ಟಿ ಬಾ.. ಲವ್ ಯೂ
ಅಬ್ಬಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಬರಹ: ಶ್ರೀಕಾಂತ ಹೆಮ್ಮಾಡಿ




