ಉಡುಪಿ: ಕೇರಳದ ಮಣ್ಣಿನಲ್ಲಿ ಹುಟ್ಟಿ, ಉದ್ಯೋಗ ಅರಸಿ ಉಡುಪಿಗೆ ಬಂದು ನೆಲೆಸಿದ ಮಲಯಾಳಿಗಳನ್ನು ಒಗ್ಗೂಡಿಸಿ ಕಟ್ಟಲಾದ ಪ್ರತಿಷ್ಠಿತ ಸಂಸ್ಥೆ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ಕೆಸಿಎಸ್‌ಸಿ) ತನ್ನ 32ನೇ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆಯನ್ನು ಸೆಪ್ಟೆಂಬರ್ 20ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್‌ನಲ್ಲಿ ವಿಜೃಂಭಣೆಯಿಂದ ಆಚರಿಸಲಿದೆ.
ಕಳೆದ 32 ವರ್ಷಗಳಿಂದ ಉಡುಪಿಯಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಕೆಸಿಎಸ್‌ಸಿ, ಹುಟ್ಟೂರಿನ ಮಣ್ಣಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನ ಕ್ರಮವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಓಣಂ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಉಡುಪಿನಲ್ಲಿ ಹಲವು ದಶಕಗಳಿಂದ ನೆಲೆಸಿರುವ ಮಲಯಾಳಿ ಕುಟುಂಬಗಳ ಮಕ್ಕಳು ಹಾಗೂ ಮೊಮ್ಮಕ್ಕಳು ಕನ್ನಡ ಸಂಸ್ಕೃತಿಯೊಂದಿಗೆ ಬೆಳೆದಿರುವ ಹಿನ್ನೆಲೆಯಲ್ಲಿ, ತಮ್ಮ ಮೂಲ ಸಂಸ್ಕೃತಿಯ ಪರಿಚಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಯೂ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಫರೀದ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಐಎಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಐಪಿಎಸ್, ಮಾಹೆ ಹೆಲ್ತ್ ಸೈನ್ಸಸ್ ಪ್ರೊ-ವೈಸ್ ಚಾನ್ಸೆಲರ್ ಡಾ. ಮ್ಯಾಥ್ಯೂಸ್ ಜಾಕೋಬ್, ನೋರ್ಕಾ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಕೆ., ಕೇರಳ ಸಮಾಜಂ ಮಂಗಳೂರು ಅಧ್ಯಕ್ಷ ಟಿ.ಕೆ. ರಾಜನ್, ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ.ಆರ್., ಕೆಸಿಎಸ್‌ಸಿ ಕಾರ್ಯದರ್ಶಿ ಬಿನೇಶ್ ವಿ.ಸಿ., ಕೋಶಾಧಿಕಾರಿ ಶಾಜಿ ವಿ. ಕರುಣ್ ಹಾಗೂ ಕೆಸಿಎಸ್‌ಸಿ ನಿಕಟಪೂರ್ವ ಅಧ್ಯಕ್ಷ ಸುಗುಣ ಕುಮಾರ್ ಎಂ.ಜೆ.ಎಫ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆಸಿಎಸ್‌ಸಿ ಅಧ್ಯಕ್ಷ ರಾಜನ್ ಫಿಲಿಪ್ಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಪಂಚರತ್ನ ಪ್ರಶಸ್ತಿ ಪ್ರದಾನ
2026ನೇ ಸಾಲಿನ ಕೆಸಿಎಸ್‌ಸಿ ಪಂಚರತ್ನ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರಿಗೆ ನೀಡಿ ಗೌರವಿಸಲಾಗುವುದು. ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಡಾ. ವಿನೋದ್ ವಿ. ಥೋಮಸ್, ಆರೋಗ್ಯ ಕ್ಷೇತ್ರದ ಸಾಧನೆಗಾಗಿ ಡಾ. ರಾಜೇಶ್ ನಾಯರ್, ಕೃಷಿ ಕ್ಷೇತ್ರದ ಸಾಧನೆಗಾಗಿ ಎಂ.ಎಲ್. ಜೋಸೆಫ್, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದ ಸಾಧನೆಗಾಗಿ ಲಿಯಾಕತ್ ಅಲಿ ಹಾಗೂ ಯುವ ನೃತ್ಯಗಾತಿ ಸಾನ್ವಿ ರಾಜೇಶ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೆಸಿಎಸ್‌ಸಿ ಸದಸ್ಯರ ಕುಟುಂಬಗಳ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುವುದು.
ಸಂಸ್ಥೆಯು ಅಶಕ್ತರಿಗೆ ಧನ ಸಹಾಯ, ಕೇರಳದಿಂದ ಉಡುಪಿಗೆ ಬಂದು ದಾರಿ ತಪ್ಪಿದವರನ್ನು ಅವರ ಊರಿನವರೊಂದಿಗೆ ಸಂಪರ್ಕಿಸಿ ಸೇರಿಸುವುದು ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ವಿವಿಧ ರೀತಿಯ ನೆರವು ನೀಡುತ್ತಿದೆ. ಮಲಯಾಳಂ ಮಿಷನ್ ಮೂಲಕ ಮಲಯಾಳಂ ಭಾಷೆ ಕಲಿಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೇರಳ ಸರ್ಕಾರದ ನೋರ್ಕಾ ಮೂಲಕ ಪರವೂರಿನಲ್ಲಿ ನೆಲೆಸಿರುವವರಿಗೆ ದೊರೆಯುವ ಆರೋಗ್ಯ ವಿಮೆ ಸೌಲಭ್ಯವನ್ನು ಈ ಬಾರಿ ಸಂಘದ ಸದಸ್ಯರ ಕುಟುಂಬಗಳಿಗೆ ದೊರಕಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ.
70 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪರಸ್ಪರ ಸಹಕಾರದೊಂದಿಗೆ ಉಲ್ಲಾಸದಿಂದ ಬದುಕಲು ಅನುಕೂಲವಾಗುವಂತೆ ‘ಸೂಪರ್ ಸೆವೆಂಟಿ’ ಎಂಬ ನೂತನ ಶಾಖೆಯನ್ನು ಆರಂಭಿಸಲಾಗುತ್ತಿದೆ. ಇದೇ ವೇಳೆ ಸಂಘದ ಚಟುವಟಿಕೆಗಳಲ್ಲಿ ಚೈತನ್ಯ ತುಂಬಲು ಹಾಗೂ ಯುವ ಸಮುದಾಯವನ್ನು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ‘ಯೂತ್ ವಿಂಗ್’ ಆರಂಭಿಸಲಾಗುತ್ತಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯ
ಸಮಾರಂಭದ ವಿಶೇಷ ಆಕರ್ಷಣೆಯಾಗಿ ಸೆಲೆಬ್ರಿಟಿ ಮಲಯಾಳಂ ನಟ ರಾಜೇಶ್ ಹೆಬ್ಬಾರ್ ಭಾಗವಹಿಸಲಿದ್ದಾರೆ. ಕಲಾಭವನ್ ರಾಜೇಶ್ ನೇತೃತ್ವದಲ್ಲಿ ಕಿರುತೆರೆಯ ಪ್ರಸಿದ್ಧ ಗಾಯಕರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ.
ಕೆಸಿಎಸ್‌ಸಿ ಕುಟುಂಬ ಸದಸ್ಯರಿಂದ ಸ್ವಾಗತ ನೃತ್ಯ, ಪುಷ್ಪಾಂಜಲಿ, ತಿರುವಾದಿರ ಕಳಿ, ಭರತನಾಟ್ಯ, ಮೋಹಿನಿಯಾಟ್ಟಂ, ಫ್ಯೂಷನ್ ಡಾನ್ಸ್, ಕೊಯಿತು ಪಾಟ್ಟು ಡಾನ್ಸ್, ಕೈಕೊಟ್ಟಿಕಳಿ, ಮಹಾಭಾರತ ಥೀಮ್ ಹಾಗೂ ಸಿನೆಮ್ಯಾಟಿಕ್ ಡಾನ್ಸ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾಲೇಜು ವಿದ್ಯಾರ್ಥಿನಿಯರಿಗಾಗಿ ‘ಅತ್ತಾಪೂಕಳಂ’ ಹೂವಿನ ರಂಗೋಲಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.
ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಮಿತ್ರ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಮಧ್ಯಾಹ್ನ ಕೇರಳದ ವಿವಿಧ ಅಪರೂಪದ ಖಾದ್ಯ ಪದಾರ್ಥಗಳನ್ನು ಒಳಗೊಂಡ ಓಣ ಸದ್ಯದ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಕೆಸಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.




