Saturday, May 30, 2026

‘45’ ಚಿತ್ರದ ಶೀರ್ಷಿಕೆ ವಿಚಾರ: ಸೌಜನ್ಯಕ್ಕೂ ಹೆಸರು ಉಲ್ಲೇಖಿಸಿಲ್ಲವೆಂದು ನಟ ಮಿತ್ರ ಅಸಮಾಧಾನ

ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ ‘45’ ಚಿತ್ರದ ಶೀರ್ಷಿಕೆ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಟೈಟಲ್ ತನ್ನದಾಗಿದ್ದರೂ, ಸೌಜನ್ಯಕ್ಕೂ ತನ್ನ ಹೆಸರನ್ನು ಉಲ್ಲೇಖಿಸಿಲ್ಲ ಎಂದು ನಟ ಹಾಗೂ ಕಿರುತೆರೆ ಕಲಾವಿದ ಮಿತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘45’ ಚಿತ್ರ ಇತ್ತೀಚೆಗೆ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ಇದೀಗ ಒಟಿಟಿ ವೇದಿಕೆಯಲ್ಲೂ ಲಭ್ಯವಾಗಿದೆ. ಈ ನಡುವೆ ಚಿತ್ರದ ಶೀರ್ಷಿಕೆ ಸಂಬಂಧಿಸಿದ ವಿವಾದ ಸುದ್ದಿಯಾಗುತ್ತಿದೆ.

‘45’ ಶೀರ್ಷಿಕೆ ನನ್ನದು: ಮಿತ್ರ

ಈ ಕುರಿತು ಯೂಟ್ಯೂಬ್ ಚಾನೆಲ್‌ಗೆ ಮಾತನಾಡಿರುವ ನಟ ಮಿತ್ರ, ‘45’ ಶೀರ್ಷಿಕೆಯನ್ನು ತಾನೇ ಮೊದಲು ನೋಂದಣಿ ಮಾಡಿಸಿದ್ದೆ ಮತ್ತು ಅದನ್ನು ಚಿತ್ರತಂಡಕ್ಕೆ ನೀಡಿದ್ದೇನೆ ಎಂದು ಹೇಳಿದ್ದಾರೆ.

‘45’ ಶೀರ್ಷಿಕೆ ಚಿತ್ರಕಥೆಗೆ ಸೂಕ್ತವಾಗಿರುವುದರಿಂದ ನಿರ್ದೇಶಕರು ಹಾಗೂ ನಿರ್ಮಾಪಕರು ಅದನ್ನೇ ಬಳಸಲು ನಿರ್ಧರಿಸಿದ್ದರು. ಈ ವೇಳೆ, ಆ ಶೀರ್ಷಿಕೆಯನ್ನು ಮಿತ್ರ ತಮ್ಮ ಬ್ಯಾನರ್ ಅಡಿಯಲ್ಲಿ ಈಗಾಗಲೇ ನೋಂದಣಿ ಮಾಡಿಸಿರುವುದು ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ತಿಳಿದುಬಂದಿದೆ. ಬಳಿಕ ಅವರೊಂದಿಗೆ ಸಂಪರ್ಕಿಸಿ ಶೀರ್ಷಿಕೆಯನ್ನು ಪಡೆದುಕೊಳ್ಳಲಾಗಿದೆ.

ಹಣ ಬೇಡ ಎಂದೆ, ಗೌರವ ಬೇಕಿತ್ತು

ಈ ಬಗ್ಗೆ ಮಾತನಾಡಿದ ಮಿತ್ರ,
“‘45’ ಟೈಟಲ್ ನನ್ನ ಬ್ಯಾನರ್ ಅಡಿಯಲ್ಲಿ ನೋಂದಣಿ ಮಾಡಿಸಿದ್ದೆ. ನಿರ್ಮಾಪಕ ರಮೇಶ್ ರೆಡ್ಡಿ ಕರೆ ಮಾಡಿ, ನಮ್ಮ ಕಥೆಗೆ ಈ ಶೀರ್ಷಿಕೆ ತುಂಬಾ ಹೊಂದಿಕೆಯಾಗುತ್ತದೆ, ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಹಣ ನೀಡಲು ಮುಂದಾದರು. ಆದರೆ ನಾನು ಹಣ ಬೇಡವೆಂದು ಸ್ಪಷ್ಟವಾಗಿ ಹೇಳಿದೆ,” ಎಂದು ತಿಳಿಸಿದ್ದಾರೆ.

“ಥ್ಯಾಂಕ್ಸ್ ಕಾರ್ಡ್‌ನಲ್ಲಿ ಅಥವಾ ಕನಿಷ್ಠ ಸಂದರ್ಶನದಲ್ಲಾದರೂ ನನ್ನ ಹೆಸರನ್ನು ಉಲ್ಲೇಖಿಸುತ್ತಾರೆ ಎಂದುಕೊಂಡಿದ್ದೆ. ಕೊನೆಪಕ್ಷ ಅರ್ಜುನ್ ಜನ್ಯ ನನ್ನನ್ನು ನೆನಪಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಏನೂ ಆಗಿಲ್ಲ. ಪ್ರೀತಿಯಿಂದ ಶೀರ್ಷಿಕೆಯನ್ನು ಬಿಟ್ಟುಕೊಟ್ಟಿದ್ದೇನೆ, ಹಣದ ನಿರೀಕ್ಷೆ ಇರಲಿಲ್ಲ. ಆದರೆ ನನ್ನ ಸೇವೆಯನ್ನು ಗೌರವಿಸಬೇಕಿತ್ತು ಎಂಬುದು ನನ್ನ ಅಭಿಪ್ರಾಯ,” ಎಂದು ಮಿತ್ರ ಬೇಸರ ವ್ಯಕ್ತಪಡಿಸಿದರು.

ಚಿತ್ರದ ಶೀರ್ಷಿಕೆ ವಿಚಾರವಾಗಿ ನಟ ಮಿತ್ರ ಅವರ ಈ ಹೇಳಿಕೆಗಳು ಇದೀಗ ಕನ್ನಡ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿವೆ.

More like this
Related

ಕೇರಳದಲ್ಲಿ ಭಾರೀ ಡ್ರಗ್ಸ್ ಜಾಲ ಭೇದನೆ; ₹70 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ

ಆಪರೇಷನ್ ಚಕ್ರವ್ಯೂಹ’ ಅಡಿಯಲ್ಲಿ ಡಿಆರ್‌ಐ ಕಾರ್ಯಾಚರಣೆ; 24 ಕೆ.ಜಿ.ಗಿಂತ ಹೆಚ್ಚು ಮಾದಕ...

ಪತ್ನಿಯನ್ನು ಗಂಟೆಗಳ ಕಾಲ ‘ಕೋಳಿ’ ಭಂಗಿಯಲ್ಲಿ ನಿಲ್ಲಿಸಿ ಹಿಂಸೆ; ತಪ್ಪಿಸಿಕೊಂಡ ಬಳಿಕ ಚಾಕುವಿನಿಂದ ಇರಿದ ಪತಿ ಬಂಧನ

ಮುಂಬೈನಲ್ಲಿ ಅಮಾನುಷ ಘಟನೆ; ಪತ್ನಿಗೆ ಕತ್ತಿಯಿಂದ ಬೆದರಿಕೆ, ಆಸಿಡ್ ದಾಳಿ ಮಾಡುವುದಾಗಿ...

ಸುಮನಸಾ ರಜತ ಮಹೋತ್ಸವಕ್ಕೆ ಮೇ 31ರಂದು ಚಾಲನೆ

ಉಡುಪಿ: ಸಾಮಾಜಿಕ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಳೆದ 25...

ವರಾಹಿ ಮೂಲ ಯೋಜನೆ ಹಳ್ಳ ಹಿಡಿಯಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ : ಕೆ ವಿಕಾಸ್ ಹೆಗ್ಡೆ

ವಾರಾಹಿ ಯೋಜನೆ ವಿಳಂಬದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವ...

Copying is disabled on Udupi Digital News.