ಬೆಂಗಳೂರು: ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಸಿನಿಮಾ ತಂಡ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮ್ಮ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, “‘ಲ್ಯಾಂಡ್ ಲಾರ್ಡ್’ ಚಿತ್ರತಂಡದವರು ಇಂದು ನನ್ನನ್ನು ಭೇಟಿಯಾಗಿ, ತಮ್ಮ ಸಿನಿಮಾ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು” ಎಂದು ತಿಳಿಸಿದ್ದಾರೆ.
ಸಿನಿಮಾ ಸಮಾಜದಲ್ಲಿನ ಜಾತಿ ಅಸಮಾನತೆ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಬೆಳಕು ಚೆಲ್ಲುವ ದಿಟ್ಟ ಪ್ರಯತ್ನವಾಗಿದೆ ಎಂದು ಸಿಎಂ ಶ್ಲಾಘಿಸಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಕಥಾಹಂದರದ ಸಿನಿಮಾಗಳು ಅಪರೂಪವಾಗಿವೆ. ಈ ಹಿನ್ನೆಲೆ ‘ಲ್ಯಾಂಡ್ ಲಾರ್ಡ್’ ಒಂದು ಮಹತ್ವದ ಹಾಗೂ ಧೈರ್ಯದ ಪ್ರಯತ್ನ. ಇಡೀ ಚಿತ್ರತಂಡ ಅಭಿನಂದನಾರ್ಹ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸಿರುವ ‘ಲ್ಯಾಂಡ್ ಲಾರ್ಡ್’ ಸಿನಿಮಾ ಶತದಿನೋತ್ಸವ ಪೂರೈಸಲಿ ಹಾಗೂ ಇಂತಹ ಇನ್ನಷ್ಟು ಸಾಮಾಜಿಕ ಸಂದೇಶ ಹೊಂದಿದ ಚಿತ್ರಗಳು ಮೂಡಿಬರಲು ಇದು ಪ್ರೇರಣೆಯಾಗಲಿ ಎಂದು ಸಿಎಂ ಹಾರೈಸಿದ್ದಾರೆ.
“ಇದು ಎಲ್ಲರೂ ನೋಡಲೇಬೇಕಾದ ಸಿನಿಮಾ. ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಚಿತ್ರ ವೀಕ್ಷಿಸುತ್ತೇನೆ. ನೀವೂ ನೋಡಿ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಿ ಚಿತ್ರತಂಡ ವಿಶೇಷ ಶೋ ಆಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ.




