ಹೈದರಾಬಾದ್: ನಟ ನಾಗ ಚೈತನ್ಯ ತಮ್ಮ ಎರಡನೇ ವಿವಾಹದ ಬಳಿಕ ಪತ್ನಿ ಶೋಭಿತಾ ಧುಲಿಪಾಲ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದು, ಅವರ ವಿರುದ್ಧ ನಡೆಯುತ್ತಿರುವ ಟೀಕೆಗಳು ಅನ್ಯಾಯಕರ ಎಂದು ಹೇಳಿದ್ದಾರೆ.
ನಟಿ ಸಮಂತಾ ಅವರೊಂದಿಗೆ ವಿಚ್ಛೇದನವಾದ ಬಳಿಕ ನಾಗ ಚೈತನ್ಯ, 2024ರ ಡಿಸೆಂಬರ್ 4ರಂದು ನಟಿ ಶೋಭಿತಾ ಧುಲಿಪಾಲ ಅವರನ್ನು ವಿವಾಹವಾಗಿದ್ದರು.
ಇತ್ತೀಚೆಗೆ ಮಾತನಾಡಿದ ಅವರು, ತಮ್ಮ ಮತ್ತು ಶೋಭಿತಾ ಪರಿಚಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಆರಂಭವಾಗಿತ್ತು ಎಂದು ತಿಳಿಸಿದ್ದಾರೆ. ಬಳಿಕ ಸ್ನೇಹ ಬೆಳೆದು, ಪರಸ್ಪರ ಅರ್ಥ ಮಾಡಿಕೊಂಡ ನಂತರ ಅದು ಪ್ರೀತಿಗೆ ತಿರುಗಿತು ಎಂದು ಹೇಳಿದ್ದಾರೆ.
“ನನಗೆ ನಿಜವಾಗಿಯೂ ಅವಳ ಬಗ್ಗೆ ಬೇಸರವಾಗುತ್ತದೆ. ಶೋಭಿತಾ ಯಾವುದೇ ತಪ್ಪು ಮಾಡಿಲ್ಲ. ನಾವು ಸಹಜವಾಗಿ ಪರಿಚಯವಾಗಿ ಸ್ನೇಹ ಬೆಳೆಸಿಕೊಂಡೆವು. ನಂತರ ಅದು ನೈಜ ಪ್ರೀತಿಗೆ ತಿರುಗಿತು. ಆದರೆ ಅವಳ ಸುತ್ತ ನಡೆಯುತ್ತಿರುವ ದ್ವೇಷ ಅನ್ಯಾಯವಾಗಿದೆ,” ಎಂದು ನಾಗ ಚೈತನ್ಯ ಹೇಳಿದ್ದಾರೆ.
ಅವರು ಮುಂದುವರಿದು, “ನನ್ನ ಹಿಂದಿನ ಜೀವನಕ್ಕೂ ಅವಳಿಗೂ ಯಾವುದೇ ಸಂಬಂಧ ಇಲ್ಲ. ಅವಳ ತಾಳ್ಮೆ ಹಾಗೂ ಪ್ರಬುದ್ಧತೆಗೆ ನಾನು ಮನಸೋತಿದ್ದೇನೆ. ಅವಳು ನಿಜವಾದ ಹೀರೋ,” ಎಂದು ಪ್ರಶಂಸಿಸಿದ್ದಾರೆ.
ಶೋಭಿತಾ ತಮ್ಮನ್ನು ಅರ್ಥ ಮಾಡಿಕೊಂಡಿರುವ ರೀತಿಯಿಂದ ಖುಷಿಯಾಗಿದ್ದು, ಅವರ ಪರಿಸ್ಥಿತಿ ನೋಡಿ ಸಂಕಟವಾಗುತ್ತದೆ ಎಂದೂ ನಾಗ ಚೈತನ್ಯ ತಿಳಿಸಿದ್ದಾರೆ.




