ಡೆನ್ಮಾರ್ಕ್, : ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫ್ರಾನ್ಸ್ ಇತಿಹಾಸ ನಿರ್ಮಿಸಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿದ ಫ್ರಾನ್ಸ್, ಈಗ ಸೆಮಿಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.
ಫ್ರಾನ್ಸ್ ತಂಡ ಸಂಪೂರ್ಣವಾಗಿ ಸಿಂಗಲ್ಸ್ ಪಂದ್ಯಗಳಲ್ಲೇ ಮೇಲುಗೈ ಸಾಧಿಸಿ ಜಪಾನ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿತು. ಮೊದಲ ಪಂದ್ಯದಲ್ಲಿ ಕ್ರಿಸ್ಟೋ ಪೊಪೋವ್, ಕೊಡೈ ನಾರೋಕಾ ವಿರುದ್ಧ ಕಠಿಣ ಹೋರಾಟದ ಬಳಿಕ ಗೆಲುವು ಸಾಧಿಸಿ ತಂಡಕ್ಕೆ ಮುನ್ನಡೆ ತಂದರು.
ನಂತರ ಅಲೆಕ್ಸ್ ಲಾನಿಯರ್, ಯುಶಿ ತನಾಕಾ ವಿರುದ್ಧ ನೇರ ಗೇಮ್‌ಗಳಲ್ಲಿ ಜಯಗಳಿಸಿ ಫ್ರಾನ್ಸ್ ಮುನ್ನಡೆಯನ್ನು 2-0ಕ್ಕೆ ಏರಿಸಿದರು. ಮೂರನೇ ಪಂದ್ಯದಲ್ಲಿ ಟೋಮಾ ಜೂನಿಯರ್ ಪೊಪೋವ್, ಕೋಕಿ ವತನಾಬೆ ವಿರುದ್ಧ 21-19, 23-21 ಅಂತರದಲ್ಲಿ ರೋಚಕ ಜಯ ಸಾಧಿಸಿ ಫ್ರಾನ್ಸ್‌ಗೆ ಐತಿಹಾಸಿಕ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದರು.
ಈ ಗೆಲುವಿನೊಂದಿಗೆ ಫ್ರಾನ್ಸ್ ಥಾಮಸ್ ಕಪ್‌ನಲ್ಲಿ ಮೊದಲ ಪದಕವನ್ನೂ ಖಚಿತಪಡಿಸಿಕೊಂಡಿದೆ. ಇನ್ನೊಂದೆಡೆ ಭಾರತ, ಚೈನೀಸ್ ತೈಪೆ ವಿರುದ್ಧ 3-0 ಅಂತರದ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಲಕ್ಷ್ಯ ಸೇನ್, ಆಯುಷ್ ಶೆಟ್ಟಿ ಹಾಗೂ ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಭಾರತದ ಗೆಲುವಿಗೆ ಕಾರಣರಾದರು.
ಇನ್ನು ಆತಿಥೇಯ ಡೆನ್ಮಾರ್ಕ್, ಥೈಲ್ಯಾಂಡ್ ವಿರುದ್ಧ 3-1 ಅಂತರದಲ್ಲಿ ಜಯ ಸಾಧಿಸಿ ಕೊನೆಯ ನಾಲ್ಕರ ಹಂತಕ್ಕೇರಿದೆ. ಈಗ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಫ್ರಾನ್ಸ್ ಮುಖಾಮುಖಿಯಾಗಲಿದ್ದು, ಪ್ರಶಸ್ತಿ ಪೈಪೋಟಿಗೆ ಮತ್ತಷ್ಟು ರೋಚಕತೆ ಸೇರ್ಪಡೆಯಾಗಿದೆ.




