ಹೋರ್ಸೆನ್ಸ್ (ಡೆನ್ಮಾರ್ಕ್), : ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ಭಾರತ 3-0 ಅಜೇಯ ಮುನ್ನಡೆ ಸಾಧಿಸಿ ಕೊನೆಯ ನಾಲ್ಕರ ಹಂತಕ್ಕೆ ಲಗ್ಗೆ ಇಟ್ಟಿತು.
ಗ್ರೂಪ್ ಹಂತದಲ್ಲಿ ಚೀನಾ ಬಳಿಕ ಎರಡನೇ ಸ್ಥಾನ ಪಡೆದಿದ್ದ ಭಾರತ, ಕ್ವಾರ್ಟರ್‌ಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿತು.
ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್, ಚೌ ಟಿಯೆನ್ ಚೆನ್ ವಿರುದ್ಧ 18-21, 22-20, 21-17 ಅಂತರದಲ್ಲಿ ಹೋರಾಟದ ಗೆಲುವು ಸಾಧಿಸಿದರು. ಮೊದಲ ಗೇಮ್ ಕಳೆದುಕೊಂಡಿದ್ದರೂ, ಎರಡನೇ ಗೇಮ್‌ನಲ್ಲಿ ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡು ಪಂದ್ಯವನ್ನು ನಿರ್ಣಾಯಕ ಗೇಮ್‌ಗೆ ಕೊಂಡೊಯ್ದರು. ಅಂತಿಮ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದ ಲಕ್ಷ್ಯ ಭಾರತಕ್ಕೆ ಮುನ್ನಡೆ ತಂದರು.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ, ಚಿಯು ಹ್ಸಿಯಾಂಗ್ ಚಿಹ್ ಮತ್ತು ವಾಂಗ್ ಚಿ-ಲಿನ್ ವಿರುದ್ಧ 23-21, 19-21, 21-12 ಅಂತರದಲ್ಲಿ ಗೆದ್ದು ಭಾರತದ ಮುನ್ನಡೆಯನ್ನು 2-0ಕ್ಕೆ ಏರಿಸಿತು.
ನಂತರ ಎರಡನೇ ಸಿಂಗಲ್ಸ್‌ನಲ್ಲಿ ಆಯುಷ್ ಶೆಟ್ಟಿ, ಲಿನ್ ಚುನ್ ಯಿ ವಿರುದ್ಧ 21-16, 21-17 ನೇರ ಗೇಮ್‌ಗಳಲ್ಲಿ ಜಯಗಳಿಸಿ ಭಾರತಕ್ಕೆ ಸೆಮಿಫೈನಲ್ ಟಿಕೆಟ್ ಖಚಿತಪಡಿಸಿದರು.
ಭಾರತ ಇದೀಗ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ಮತ್ತು ಜಪಾನ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ. ಸೆಮಿಫೈನಲ್ ಶನಿವಾರ ನಡೆಯಲಿದ್ದು, ಫೈನಲ್ ಭಾನುವಾರ ನಡೆಯಲಿದೆ.
ಭಾರತ 2022ರಲ್ಲಿ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ಮತ್ತೊಮ್ಮೆ ಪ್ರಶಸ್ತಿಯತ್ತ ಬಲಿಷ್ಠ ಹೆಜ್ಜೆ ಇಟ್ಟಿದೆ.




