ಉಡುಪಿ: 76 ವರ್ಷದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ ₹4.40 ಲಕ್ಷ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವ ಘಟನೆ ನಡೆದಿದೆ.
ಉಡುಪಿಯ ವಿಠಲ (76) ಅವರು ಅಲೆವೂರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ₹6 ಲಕ್ಷ ಹಣ ಇಟ್ಟಿದ್ದರು. ಈ ಹಣವನ್ನು ಬ್ಯಾಂಕ್ ಆಫ್ ಬರೋಡಾ ಖಾತೆಗೆ ವರ್ಗಾಯಿಸುವ ಉದ್ದೇಶದಿಂದ ಜೂನ್ 22ರಂದು ಬ್ಯಾಂಕ್ಗೆ ತೆರಳಿ ಉಪಶಾಖಾಧಿಕಾರಿಗೆ ಮಾಹಿತಿ ನೀಡಿ, ಅಗತ್ಯ ದಾಖಲೆಗಳಿಗೆ ಸಹಿ ಮಾಡಿ ಬಂದಿದ್ದರು.
ಬಳಿಕ ಕಾರಣಾಂತರಗಳಿಂದ ತಮ್ಮ ಮಗಳ ಮನೆಗೆ ವಿಶಾಖಪಟ್ಟಣಕ್ಕೆ ತೆರಳಿದ್ದ ಅವರು, ಸೆಪ್ಟೆಂಬರ್ 8ರಂದು ವಾಪಸ್ ಬಂದು ಯೂನಿಯನ್ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ, ತಮ್ಮ ಉಳಿತಾಯ ಖಾತೆಯಿಂದ ₹4.40 ಲಕ್ಷ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.
ಜೂನ್ 15ರಂದು ಅಪರಿಚಿತ ವ್ಯಕ್ತಿಗಳು ತಮ್ಮ ಅರಿವಿಗೆ ಬಾರದಂತೆ ಬ್ಯಾಂಕ್ ಖಾತೆಯಿಂದ ₹4.40 ಲಕ್ಷ ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ವಿಠಲ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಉಡುಪಿ ನಗರ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.




