ಉಡುಪಿ: 25 ವರ್ಷಗಳ ಸಹಕಾರಿ ಸೇವೆಯ ಮೈಲಿಗಲ್ಲು ತಲುಪಿರುವ ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆಯ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 24ರಂದು ಶನಿವಾರ ಸಂಜೆ 4.30ಕ್ಕೆ ಉಡುಪಿಯ ಜೋಡುಕಟ್ಟೆಯ ಆಶ್ರಯ ಟವರ್ಸ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2000ನೇ ಇಸವಿಯಲ್ಲಿ ಶಿವಪಾಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಎಂಬ ಹೆಸರಿನಲ್ಲಿ ಆರಂಭಗೊಂಡ ಸಂಸ್ಥೆ, ಆರಂಭಿಕ ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಇಂದು ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಎಂಬ ಹೆಸರಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಸ್ಥೆಯು ಪ್ರಸ್ತುತ ರಜತೋತ್ಸವದ ಸಂಭ್ರಮದಲ್ಲಿದ್ದು, ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಆರಂಭಿಸುತ್ತಿರುವುದು ಅಭಿವೃದ್ಧಿಯ ಮಹತ್ವದ ಮೈಲಿಗಲ್ಲಾಗಿದೆ ಎಂದರು.
ಸಂಸ್ಥೆಯು ಆರಂಭದಲ್ಲಿ ಎರಡು ವರ್ಷಗಳ ಕಾಲ ಶಿವಪಾಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹೆಸರಿನಲ್ಲಿ ಕಾರ್ಯನಿರ್ವಹಿಸಿತ್ತು. ಬಳಿಕ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಹೊಸ ಆಡಳಿತ ಮಂಡಳಿಯ ಅಗತ್ಯ ಎದುರಾಯಿತು. ಈ ಸಂದರ್ಭದಲ್ಲಿ ಪೇಜಾವರ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಹಿರಿಯ ಸಹಕಾರಿ ಶಂಭು ಶೆಟ್ಟಿಯವರ ನಿರ್ದೇಶನದಂತೆ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಸಂಸ್ಥೆಯ ಅಧ್ಯಕ್ಷತೆಯ ಜವಾಬ್ದಾರಿ ವಹಿಸಿಕೊಂಡರು. ಅವರ ನೇತೃತ್ವದಲ್ಲಿ ಸಂಸ್ಥೆಯು ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಎಂಬ ಹೆಸರಿನಲ್ಲಿ ಮುನ್ನಡೆದು ಅಭಿವೃದ್ಧಿಯ ಹಾದಿಯಲ್ಲಿ ಸಾಗಿತು.
ಸಂಸ್ಥೆಯು ಕ್ರಮೇಣ ಲಾಭದಾಯಕವಾಗಿ ಬೆಳೆದಿದ್ದು, ಸದಸ್ಯರಿಗೆ ಪ್ರತಿ ವರ್ಷ ಶೇ. 12ರಷ್ಟು ಡಿವಿಡೆಂಡ್ ನೀಡುತ್ತ ಬಂದಿದೆ. ಸದಸ್ಯರ ಆರ್ಥಿಕ ಹಿತಾಸಕ್ತಿ ಹಾಗೂ ವಿಶ್ವಾಸಕ್ಕೆ ಆದ್ಯತೆ ನೀಡಿರುವ ಸಂಸ್ಥೆಯು ಪ್ರಸ್ತುತ ಸುಮಾರು 2,000 ಸದಸ್ಯರನ್ನು ಹೊಂದಿದೆ. ಸುಮಾರು ₹50 ಕೋಟಿ ಠೇವಣಿ ಸಂಗ್ರಹಿಸಿದ್ದು, ವಾರ್ಷಿಕ ₹125 ಕೋಟಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ.
ಸಂಸ್ಥೆಯ ಪ್ರಧಾನ ಕಚೇರಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕೆಂಬ ಬಹುಕಾಲದ ಕನಸು ಇದೀಗ ನನಸಾಗಿದೆ. ಸದಸ್ಯರ ಸಹಕಾರ, ಆಡಳಿತ ಮಂಡಳಿಯ ದೂರದೃಷ್ಟಿ ಹಾಗೂ ಹಲವು ವರ್ಷಗಳ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ನೂತನ ಕಟ್ಟಡದಿಂದ ಸಂಸ್ಥೆಯ ಕಾರ್ಯನಿರ್ವಹಣೆಗೆ ಮತ್ತಷ್ಟು ಅನುಕೂಲವಾಗಲಿದ್ದು, ಮುಂದಿನ ದಿನಗಳಲ್ಲಿ ಸದಸ್ಯರಿಗೆ ಉತ್ತಮ ಸೇವೆ ನೀಡಲು ಪ್ರೇರಣೆ ದೊರೆಯಲಿದೆ ಎಂದು ತಿಳಿಸಿದರು.
ಅಕ್ಟೋಬರ್ 24ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಹಕಾರಿ ಶಂಭು ಶೆಟ್ಟಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಸಹಕಾರ ಕ್ಷೇತ್ರದ ಗಣ್ಯರು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಪ್ರಭು, ಗಣೇಶ್ ಕುಮಾರ್, ಅವಿನಾಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತಾ ಪ್ರವೀಣ್ ಉಪಸ್ಥಿತರಿದ್ದರು.




