Wednesday, September 16, 2026

ಆ.15: ಕಲ್ಮಾಡಿ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ

ಉಡುಪಿ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ ಆಗಸ್ಟ್ 15 ರಂದು ವಿಜೃಂಭಣೆಯಿಂದ ಜರುಗಲಿದೆ.

ಈ ಬಾರಿಯ ಹಬ್ಬದ ಸಂದೇಶ ‘ಆತ ಹೇಳಿದಂತೆ ಮಾಡಿ’ ಎನ್ನುವುದಾಗಿದ್ದು ಪ್ರತಿ ವರ್ಷದಂತೆ ಈ ಬಾರಿ ಕೂಡ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಭತ್ತು ದಿನಗಳ ನವೇನಾ ಪ್ರಾರ್ಥನೆಗಳು ಆಗಸ್ಟ್6ರಿಂದ 14ರ ವರೆಗೆ ನಡೆಯಲಿದೆ.

ಆಗಸ್ಟ್ 6 ರಂದು ಸಂಜೆ 3.45 ಕ್ಕೆ ಸರಿಯಾಗಿ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಜೆರಾಲ್ಡ್ ಐಸಾಕ್ ಲೋಬೊ ಅವರು ಪುಣ್ಯಕ್ಷೇತ್ರದ ಬಾವುಟವನ್ನು ಹಾರಿಸುವ ಮೂಲಕ ನವೇನಾ ಪ್ರಾರ್ಥನೆಗಳಿಗೆ ಚಾಲನೆ ನೀಡಲಿರುವರು.

9ದಿನಗಳ ನೊವೆನಾ ಕಾರ್ಯಕ್ರಮದಲ್ಲಿ ಯುವಜನತೆ, ಧಾರ್ಮಿಕ ವ್ಯಕ್ತಿಗಳು, ಅಶಕ್ತರು, ಕ್ರೈಸ್ತ ಕುಟುಂಬಗಳು, ವಿದೇಶದಲ್ಲಿ ನೆಲೆಸಿರುವ ಕ್ರೈಸ್ತ ವಿಶ್ವಾಸಿಗಳು, ದಾನಿಗಳು, ಮದುವೆಯಾದ ದಂಪತಿಗಳು, ಮಕ್ಕಳು ಹಾಗೂ ಭಕ್ತರಿಗಾಗಿ ವಿಶೇಷ ಪ್ರಾರ್ಥನೆ ಗಳನ್ನು ಸಲ್ಲಿಸಲಾಗುತ್ತದೆ.

ಆಗಸ್ಟ್ 13 ರಂದು ಗುರುವಾರ ಮಧ್ಯಾಹ್ನ 2.54 ಕ್ಕೆ ಆದಿ ಉಡುಪಿ ಜಂಕ್ಷನ್ ನಿಂದ ಚರ್ಚಿನ ತನಕ ಮಾತೆ ಸ್ವರೂಪದ ಮೆರವಣಿಗೆ ನಡೆಯಲಿದ್ದು ಶಿವಮೊಗ್ಗ ಧರ್ಮಪ್ರಾಂತ್ಯದ ವಂ|ಫ್ರಾಂಕ್ಲಿನ್ ಡಿಸೋಜಾ ಚಾಲನೆ ನೀಡಲಿದ್ದಾರೆ.

ಆಗಸ್ಟ್ 15 ರ ಬೆಳಗ್ಗೆ 10.30 ಕ್ಕೆ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ನೆರೆವೇರಿಸುವರು. ಉಡುಪಿ ಧರ್ಮಪ್ರಾಂತದ ಅನೇಕ ಧರ್ಮ ಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವರು. ಅಂದು ಬೆಳಗ್ಗೆ 7.30 ಹಾಗೂ ಸಂಜೆ 4.00ಕ್ಕೆ ಕೊಂಕಣಿ ಭಾಷೆಯಲ್ಲಿ, ಮಧ್ಯಾಹ್ನ 2 ಗಂಟೆಗೆ ಕನ್ನಡ ಹಾಗೂ 6.00 ಗಂಟೆಗೆ ಇಂಗ್ಲೀಷ್ ಭಾಷೆಯಲ್ಲಿ ಇತರೆ ಬಲಿಪೂಜೆಗಳನ್ನು ಆಯೋಜಿಸಲಾಗಿದೆ ಎಂದು ಪುಣ್ಯಕ್ಷೇತ್ರದ ರೆಕ್ಟರ್ ವಂ|ಬ್ಯಾಪ್ಟಿಸ್ ಮಿನೇಜಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲ್ಮಾಡಿ ಚರ್ಚ್ ಬಗ್ಗೆ ಒಂದಷ್ಟು ಮಾಹಿತಿ: ಕಲ್ಮಾಡಿ ಆಸುಪಾಸಿನ ಕುಟುಂಬಗಳ ಧಾರ್ಮಿಕ್ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ 1972 ರಲ್ಲಿ ದಿ.ಫಾ! ಚಾರ್ಲ್ಸ್ ಡಿ’ಸೋಜಾರವರು ಸಣ್ಣ ಮಟ್ಟದಲ್ಲಿ ಸ್ಟೆಲ್ಲಾ ಮಾರಿಸ್ ಚಾಪೆಲ್ ಅನ್ನು ಕಟ್ಟಿಸಿದರು. 1991 ರಲ್ಲಿ ಇದನ್ನು ಪೂರ್ಣ ಪ್ರಮಾಣದ ಇಗರ್ಜಿಯಾಗಿ ಘೋಷಿಸಲಾಯಿತು. ಸಮುದ್ರ ತಾರೆ ಎಂದೇ ಪ್ರಸಿದ್ಧಿ ಪಡೆದ ಉಡುಪಿಯ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ನ ಹಡಗು ಮಾದರಿಯ ಚರ್ಚ್ 2018 ರಲ್ಲಿ ನೂತನವಾಗಿ ನಿರ್ಮಾಣವಾಗಿದ್ದು ಈ ಕೇಂದ್ರವನ್ನು 2022ರ ಆ.15ರಂದು ಅಂದಿನ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತೀ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಿಸಿದ್ದರು. ಪ್ರಸ್ತುತ ವಂ|ಬ್ಯಾಪ್ಟಿಸ್ ಮಿನೇಜಸ್ ಅವರು ಪುಣ್ಯಕ್ಷೇತ್ರದ ರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವರ್ಷದಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರ ವರೆಗೆ ಧ್ಯಾನಕೂಟ ನಡೆಯುತ್ತಿದ್ದು ಈ ವೇಳೆಯಲ್ಲಿ ಭೋಧನೆ, ಪರಮ ಪ್ರಸಾದದ ಆರಾಧನೆ, ದಿವ್ಯ ಬಲಿಪೂಜೆ, ವೆಲಂಕಣಿ ಮಾತೆಯ ನವೇನಾ ಪ್ರಾರ್ಥನೆ ಹಾಗೂ ಸಹಭೋಜನದ ವ್ಯವಸ್ಥೆ ಇದ್ದು ಜಿಲ್ಲೆ ಹಾಗೂ ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಮಂದಿ ಭಾಗವಹಿಸುತ್ತಾರೆ.

More like this
Related

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ : ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು – ರಮೇಶ್ ಕಾಂಚನ್

ಉಡುಪಿ: ಕಡಲನಗರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸರ್ಕಾರದ ಆಡಳಿತವನ್ನು...

ಸೆ. 18 ರಂದು ಹೆಬ್ರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ, ಕಸ್ತೂರಿ ರಂಗನ್ ವರದಿ ಕುರಿತು ಸಭೆ

ಉಡುಪಿ: ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಸೆಪ್ಟಂಬರ್ 18 ರಂದು ಜಿಲ್ಲೆಯ...

ಸೆ. 17ರಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕೊಳ್ಕೆಬೈಲು ಕಿಶನ್ ಹೆಗ್ಡೆ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೊಳ್ಕೆಬೈಲು ಕಿಶನ್...

ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಢಿಕ್ಕಿ: ಒಂದೇ ಕುಟುಂಬದ ಮೂವರು ಮೃತ್ಯು

ಸ್ವಗ್ರಾಮದಲ್ಲಿ ಚೌತಿ ಹಬ್ಬ ಮುಗಿಸಿ ಊರಿಗೆ ಮರಳುತ್ತಿದ್ದ ವೇಳೆ ದುರ್ಘಟನೆ ಮಂಡ್ಯ: ದ್ವಿಚಕ್ರ...

Copying is disabled on Udupi Digital News.